– 9 ಸುತ್ತು ಹೊಡೆದ ಇಂಡಿಗೋ ವಿಮಾನ
ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಆಗಲು ಸಾಧ್ಯವಾಗದೆ ಒಂದು ಗಂಟೆ ಕಾಲ ಆಗಸದಲ್ಲಿಯೇ ಸುತ್ತು ಹೊಡೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೇರಳದಲ್ಲಿನ ವಿಮಾನ ದುರಂತ ಮಾಸುವ ಮುನ್ನವೇ ಹವಾಮಾನ ವೈಪರೀತ್ಯದಿಂದ ಮತ್ತೊಂದು ಆತಂಕ ಇಂಡಿಗೋ ವಿಮಾನಕ್ಕೆ ಎದುರಾಗಿತ್ತು. ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡಿಂಗ್ ಆಗದೆ ಕೇರಳದಲ್ಲಿ ವಿಮಾನ ಪತನ ಸಂಭವಿಸಿತ್ತು. ಇದರ ಬೆನ್ನಲ್ಲೆ ಇಂದು ಹವಾಮಾನ ವೈಪರೀತ್ಯದಿಂದ ಇಂಡಿಗೋ ವಿಮಾನ ಒಂದು ಗಂಟೆಯ ಕಾಲ ಆಗಸದಲ್ಲಿ ಸುತ್ತು ಹೊಡೆದಿದೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ ಇಂಡಿಗೋ ವಿಮಾನ ಹವಾಮಾನ ವೈಪರೀತ್ಯದಿಂದ ಲ್ಯಾಂಡಿಂಗ್ ಆಗದೆ ಆಗಸದಲ್ಲಿ 9 ಸುತ್ತು ಹೊಡೆದಿದೆ. 60 ಪ್ರಯಾಣಿಕರನ್ನ ಹೊತ್ತು ಆಗಮಿಸಿದ ವಿಮಾನ ಮುಂಜಾನೆ 8.55ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ ವಿಮಾನ ನಿಲ್ದಾಣದ ಅಧಿಕಾರಿಗಳು ಲ್ಯಾಂಡಿಂಗ್‍ಗೆ ಅನುಮತಿ ನೀಡದ ಪರಿಣಾಮ ಒಂದು ಗಂಟೆಯ ಕಾಲ ವಿಮಾನ ಆಗಸದಲ್ಲಿ ಸುತ್ತು ಹೊಡೆಯಿತು.
ಒಂದು ಗಂಟೆ ನಂತರ ಇಂಡಿಗೋ 6E7162 ಎಟಿಆರ್ ವಿಮಾನ ಲ್ಯಾಂಡಿಗ್ ಆಗುವ ಮೂಲಕ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸಿರುವ ಬಿಟ್ಟಿದ್ದಾರೆ. ಇದೇ ವಿಮಾನದಲ್ಲಿ ಅನಂತ್ ಕುಮಾರ್ ಹೆಗಡೆ ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಕಾರವಾರಕ್ಕೆ ತೆರಳಿದ್ದರು. ವಿಮಾನದ ಲ್ಯಾಂಡಿಂಗ್ ಸಮಸ್ಯೆಯಾದ ಪರಿಣಾಮ ಪ್ರಯಾಣಿಕರು ಕೆಲಕಾಲ ಆತಂಕಕ್ಕೂ ಸಹ ಒಳಗಾಗಿದ್ದರು.