ಚಿತ್ರದುರ್ಗ: ಒಂದು ಕೋಟಿ ವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ. ಬಂದತಕ್ಷಣ ಎಲ್ಲರಿಗೂ ಲಸಿಕೆ ವಿತರಣೆ ಮಾಡುತ್ತೇವೆಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ.
ಚಿತ್ರದುರ್ಗದ ಎಸ್ಪಿ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೊರೊನ 2 ನೇ ಅಲೆ ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಜನರಿಗಾಗಿ 1ಕೋಟಿ ಲಸಿಕೆ ಆರ್ಡರ್ ಮಾಡಿದ್ದೇವೆ. ಆದರೆ ಲಸಿಕೆ ಇನ್ನು ಬಾರದ ಹಿನ್ನಲೆಯಲ್ಲಿ ವಿಳಂಬವಾಗಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಿಸುವ ಬಗ್ಗೆ ನಿಶ್ಚಿತ ದಿನಾಂಕ ಪ್ರಕಟಿಸಲಾಗುವುದು ಎಂದಿದ್ದಾರೆ.
45ವರ್ಷ ಮೇಲ್ಪಟ್ಟವರಿಗೆ 2ನೇ ಡೋಸ್ ಲಸಿಕೆ ವಿತರಣೆ ಎಂದಿನಂತೆ ಮುಂದುವರಿಯಲಿದೆ. ಹೊರರಾಜ್ಯಗಳಿಂದಲೂ ಹರಡುತ್ತಿರುವ ಕೊರೊನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜ್ಯದ ಗಡಿಯಲ್ಲಿ ಸೂಕ್ತ ತಪಾಸಣೆ ಮಾಡಲು ಸೂಚಿಸಿದ್ದೇನೆ. ಹಾಗೆಯೇ ಜನತಾ ಕರ್ಫ್ಯೂ ವೇಳೆ ಅನಗತ್ಯ ಓಡಾಡುವವರಿಗೆ ಕಡಿವಾಣ ಹಾಕಲು ಸಹ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಆಕ್ಸಿಜನ್ ಸ್ಟಾಕ್ ಯುನಿಟ್ ರಚನೆಗೆ ಕ್ರಮಕೈಗೊಳ್ಳಲಾಗಿದ್ದು, ಮುಂಬರುವ ದಿನಗಳಲ್ಲಿ ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪನೆ ಚಿಂತನೆ ನಡೆದಿದೆ. ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿ ಅವರ ಆರೋಗ್ಯ ಬಗ್ಗೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.