ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

Public TV
2 Min Read
rajnath singh 2

– ಗಲ್ವಾನ್ ಕಣಿವೆಯಲ್ಲಿ ಎರಡು ದೇಶಗಳ ಸೈನ್ಯ ಹಿಂದಕ್ಕೆ
– ನಿರಂತರವಾಗಿ ನಡೆಯುತ್ತಿದೆ ಮಾತುಕತೆ

ನವದೆಹಲಿ: ಗಲ್ವಾನ್ ಘರ್ಷಣೆಯಿಂದಾಗಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಈಗ ತಿಳಿಯಾಗುತ್ತಿದ್ದು ಭಾರತ ಮತ್ತು ಚೀನಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತ-ಚೀನಾ ಸಂಪೂರ್ಣವಾಗಿ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಪೂರ್ವ ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆಯ ಪಾಂಗ್ಯಾಂಗ್ ತ್ಸೋ ಸರೋವರದ ಬಳಿ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ 48 ಗಂಟೆಗಳಲ್ಲಿ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುಲಿದೆ ಎಂದು ಮಾಹಿತಿ ನೀಡಿದರು.

ಸೇನೆಯನ್ನು ಫಿಂಗರ್ 8 ಪ್ರದೇಶಕ್ಕೆ ಹಿಂದಿರುಗಿಸಲು ಚೀನಾ ಒಪ್ಪಿಕೊಂಡಿದ್ದು, ನಮ್ಮ ಸೈನಿಕರನ್ನು ಸಹ ಫಿಂಗರ್ 3ರ ಧನ್ ಸಿಂಗ್ ಥಾಪಾ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ. ಚೀನಾ ತನ್ನ ಸೈನ್ಯವನ್ನು ಪಾಂಗ್ಯಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ಕ್ಕೆ ಕಳುಹಿಸುತ್ತಿದೆ. ಭಾರತದ ಸೈನಿಕರನ್ನು ಸಹ ಫಿಂಗರ್ 3ರ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯ ಬೇರ್ಪಡಿಸುವಿಕೆ ಒಪ್ಪಂದದ ಬಗ್ಗೆ ಚೀನಾದೊಂದಿಗಿನ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರನ್ನು ಹಿಂಪಡೆಯಲಾಗುವುದು. ಭಾರತದ ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಭದ್ರತೆಯ ವಿಚಾರ ಬಂದಾಗ ಯಾರೊಂದಿಗೂ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಭರವಸೆ ನೀಡಿದರು.

India China 2

ಎಲ್‍ಒಸಿ ಬಳಿ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಭಾರತ ಯಾವಾಗಲೂ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ. ಮೊದಲನೇಯದಾಗಿ ಎರಡೂ ಕಡೆಯವರು ಎಲ್‍ಎಸಿ ನಿಯಮಗಳಿಗೆ ಬದ್ಧವಾಗಿರಬೇಕು ಹಾಗೂ ಗೌರವಿಸಬೇಕು, ಎರಡನೇಯದಾಗಿ ಯಾವುದೇ ಕಡೆಯಿಂದಲೂ ಸ್ಥಿತಿಗತಿ ಬದಲಿಸಲು ಯತ್ನಿಸಬಾರದು. ಮೂರನೇಯದಾಗಿ ಎಲ್ಲ ಹೊಂದಾಣಿಕೆಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭಾರತ ಚೀನಾ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು.

India china

ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಭಾರತದ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *