ಬೆಂಗಳೂರು: ಒಂಟಿ ಮಹಿಳೆಯ ಎದೆಗೆ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದಲ್ಲಿ ನಡೆದಿದೆ.
ಗುರುವಾರ ರಾತ್ರಿ 9 ಗಂಟೆಗೆ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಬ್ಬಳೆ ಮಹಿಳೆ ಇದ್ದಿದ್ದನ್ನು ಗಮನಿಸಿ ಕೃತ್ಯ ಎಸೆಗಲಾಗಿದೆ. ಮಹಿಳೆಯ ಎದೆಗೆ ಚಾಕು ಇರಿದು ಹತ್ಯೆ ಮಾಡಿ ಮನೆಯಲ್ಲಿದ್ದ ಸಾಮಾನು ಮತ್ತು ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಶ್ವೇತಾ ಮತ್ತು ಮುರಳಿ ದಂಪತಿ ಸಿಂಗೇನ ಅಗ್ರಹಾರದಲ್ಲಿ ವಾಸವಿದ್ದು, ಮುರಳಿ ಆನೇಕಲ್ ತಾಲೂಕಿನ ಚಂದಾಪುದಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ. ಹೀಗಾಗಿ ಮುರುಳಿ ರಾತ್ರಿ ಬರುವುದು ತಡವಾಗುತ್ತದೆ. ಇದರ ಜೊತೆಗೆ ಮನೆಯಲ್ಲಿದ್ದ ಶ್ವೇತಾಳ ಮಗು ಮತ್ತು ಅತ್ತೆ ಊರಿಗೆ ತೆರಳಿದ್ದರು. ಹೀಗಾಗಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಶ್ವೇತಾ ಒಂಟಿಯಾಗಿ ಇರುತ್ತಿದ್ದಳು. ಇದನ್ನು ಗಮನಿಸಿದ ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ.ಡಿ.ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳದಿಂದಲೂ ಕೂಡ ಸ್ಥಳ ವೀಕ್ಷಣೆ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಹೆಬ್ಬಗೋಡಿ ಇನ್ಸ್ ಪೆಕ್ಟರ್ ಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.