– ವೈದ್ಯರ ವಿರುದ್ಧ ಸಂಬಂಧಿಕರ ಆಕ್ರೋಶ
ಆನೇಕಲ್: ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ, ಐಸಿಯುನಿಂದ ಹೊರ ನಡೆದುಕೊಂಡು ಬಂದು ಆಸ್ಪತ್ರೆ ಆವರಣದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಹುಸ್ಕೂರ ಗೇಟ್ ನಲ್ಲಿರುವ ಶಸ್ತ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಐಸಿಯುನಿಂದ ರೋಗಿ ಹೊರ ಬರಲು ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಆರೋಪಿಸಿ ಆಸ್ಪತ್ರೆ ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರನ್ನು ನಾರಾಯಣರೆಡ್ಡಿ (80) ಎಂದು ಗುರುತಿಸಲಾಗಿದ್ದು, ಇವರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವೇಮನ ಆಶ್ರಮದಲ್ಲಿ ಸ್ವಾಮೀಜಿಯಾಗಿದ್ದು, ಇತ್ತೀಚೆಗೆ ಮಧುಮೇಹ ರೋಗದಿಂದ ಬಳಲುತ್ತಿದ್ದರು. ಎರಡು ದಿನದ ಹಿಂದೆ ಉಸಿರಾಟದ ಸಮಸ್ಯೆಯಾದಾಗ ಹೊಸೂರು ರಸ್ತೆ ಹುಸ್ಕೂರದ ಗೇಟ್ ನಲ್ಲಿರುವ ಶಸ್ತ್ರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿತ್ತು. ಆದರೆ ಸಂಜೆ ಐಸಿಯುನಲ್ಲಿ ಯಾವುದೇ ಸಿಬ್ಬಂದಿ ಇಲ್ಲದೇ ಇದ್ದಾಗ ರೋಗಿ ನಡೆದುಕೊಂಡು ಹೊರ ಬಂದು ಎಡವಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದು, ವದ್ಯರು ಮತ್ತು ಸಿಬ್ಬಂದಿ ಪರಾರಿಯಾಗಿದ್ದಾರೆ. ನಮ್ಮ ತಂದೆ ಸಾವಿಗೂ ಮುನ್ನ ಚೆನ್ನಾಗಿಯೇ ಮಾತಾನಾಡಿದ್ದರು. ಐಸಿಯುನಿಂದ ಹೊರಬರಲು ಆಸ್ಪತ್ರೆ ವೈದ್ಯರು ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವೆಂದು ಮೃತರ ಮಕ್ಕಳು ಆಕ್ರೋಶ ವ್ಯಕ್ತಪಡಿಸಿದರು, ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:ವಿಷಯುಕ್ತ ಆಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ್ದ ಕುಟುಂಬಕ್ಕೆ ಶಾಸಕರಿಂದ 2 ಲಕ್ಷ ಪರಿಹಾರ