– ಸಂಬಳದಲ್ಲಿ ವ್ಯತ್ಯಯವಾಗಿರುವುದನ್ನು ಒಪ್ಪಿದ ಕಂಪನಿ
ನವದೆಹಲಿ: ಕೋಲಾರದ ನರಸಾಪುರದ ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಲೀ ವಿನ್ಸೆಂಟ್ ತಲೆದಂಡವಾಗಿದೆ. ಅಷ್ಟೇ ಅಲ್ಲದೇ ಉದ್ಯೋಗಿಗಳಿಗೆ ಸಂಬಳ ನೀಡುವುದರಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಕಂಪನಿ ಒಪ್ಪಿಕೊಂಡಿದೆ.
ಕೋಲಾರದ ನರಸಾಪುರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಉದ್ಯೋಗಿಗಳು ಸಂಬಳ ನೀಡದ್ದಕ್ಕೆ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ನರಸಾಪುರದ ಘಟಕದಲ್ಲಿ ದುರದೃಷ್ಟಕರ ಘಟನೆ ನಡೆದ ಬಳಿಕ ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲ ನೌಕರರಿಗೆ ಸಂಬಳ ನೀಡದಿರುವುದು ಕಂಡುಬಂದಿದೆ. ಈ ಕುರಿತು ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೆ ನಮ್ಮೆಲ್ಲ ಉದ್ಯೋಗಿಗಳ ಕ್ಷಮೆಯಾಚಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
Advertisement
ನಮ್ಮಿಂದ ತಪ್ಪಾಗಿರುವುದನ್ನು ಅರಿತಿದ್ದೇವೆ. ಕಾರ್ಮಿಕ ಏಜೆನ್ಸಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಕೆಲ ಪ್ರಕ್ರಿಯೆಗಳನ್ನು ಬಲಪಡಿಸಬೇಕಿದೆ ಹಾಗೂ ನವೀಕರಿಸಬೇಕಿದೆ. ಶಿಸ್ತು ಕ್ರಮ ಸೇರಿದಂತೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಇದರ ಭಾಗವಾಗಿ ಕಂಪನಿಯ ಭಾರತದ ಉಪಾಧ್ಯಕ್ಷರನ್ನು ಹುದ್ದೆಯಿಂದ ತೆಗೆಯಲಾಗಿದೆ. ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡಗಳನ್ನು ಪುನರ್‍ರಚಿಸುತ್ತೇವೆ ಎಂದು ಶನಿವಾರ ವಿಸ್ಟ್ರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Advertisement
Advertisement
ಉಪಾಧ್ಯಕ್ಷ ಹುದ್ದೆಯಲ್ಲಿದ್ದ ವಿನ್ಸೆಂಟ್ ಲೀಯವರನ್ನು ತೆಗೆದು ಹಾಕಲಾಗಿದ್ದು, ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‍ನ ಭಾರತದ ಎಂಡಿಯಾಗಿ ಸುಧಿತೋ ಗುಪ್ತಾ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ನೀಡಿ, ಈ ಕುರಿತು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಕಾರ್ಮಿಕರಿಗಾಗಿ ನೌಕರರ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಲು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ತೆರೆಯುತ್ತೇವೆ. ನಮ್ಮ ವ್ಯವಹಾರ ಹಾಗೂ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಕಾರ್ಮಿಕ ಇಲಾಖೆ ಕಂಪನಿಯ ಅವ್ಯವಸ್ಥೆ ಕುರಿತು ಎಚ್ಚರಿಸಿದ ಬಳಿಕ ವಿಸ್ಟ್ರನ್ ಹೇಳಿಕೆ ಬಿಡುಗಡೆ ಮಾಡಿದೆ. ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳ ಹಾಗೂ ಹಾಜರಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಅಲ್ಲದೆ ಉದ್ಯೋಗಿಗಳ ಕುರಿತು ಯಾವುದೇ ವಿವರಣೆ ಇರಲಿಲ್ಲ. ಅಲ್ಲದೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಒತ್ತಡ ಹೇರಲಾಗಿತ್ತು. ಉದ್ಯೋಗಿಗಳ ಎಷ್ಟು ಗಂಟೆ ಕೆಲಸ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಸಂಗ್ರಹಿಸುವ ವ್ಯವಸ್ಥೆ ಸರಿಯಿಲ್ಲ. ಸರಿಯಾದ ಸಮಯಕ್ಕೆ ಸಂಬಳ ಪಾವತಿ ಆಗುತ್ತಿರಲಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.
ವಿಸ್ಟ್ರಾನ್ 2,850 ಕೋಟಿ ರೂ.ಗಳನ್ನು ಕೋಲಾರದ ಪ್ಲಾಂಟ್‍ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಇದರ ಒಟ್ಟು ಮೊತ್ತವನ್ನು 18,000 ಕೋಟಿ ರೂ.ಗೆ ಕ್ಕೆ ಹೆಚ್ಚಿಸಲು ಬದ್ಧವಾಗಿತ್ತು. ಇದು ಪ್ರಸ್ತುತ 10 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಂಡಿದೆ. ಸ್ಮಾರ್ಟ್‍ಫೋನ್‍ನಿಂದ ಐಒಟಿ ವಸ್ತುಗಳವರೆಗೆ ಹಾಗೂ ಬಯೋಟೆಕ್ ಡಿವೈಸ್‍ಗಳನ್ನು ಉತ್ಪಾದಿಸುವುದಾಗಿ ಸಂಸ್ಥೆ ಹೂಡಿಕೆ ಮಾಡಿದೆ.
ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಆಪಲ್ ಕಂಪನಿ ತನಿಖೆ ನಡೆಸಲು ತನ್ನ ಭಾರತದ ಅಧಿಕಾರಿಗಳನ್ನು ಘಟಕಕ್ಕೆ ಕಳುಹಿಸಿಕೊಟ್ಟಿತ್ತು.