ಚೆನ್ನೈ: ಐಪಿಎಲ್‍ನಲ್ಲಿ ದಕ್ಷಿಣ ಆಫ್ರಿಕಾದ ಆಲ್‍ರೌಂಡರ್ ಆಟಗಾರ ಕ್ರೀಸ್ ಮೋರಿಸ್ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ನಡೆಯುತ್ತಿರುವ ಬಿಡ್‍ನಲ್ಲಿ 16.25 ಕೋಟಿ ರೂ. ನೀಡಿ ರಾಜಸ್ಥಾನ ರಾಯಲ್ಸ್ ತಂಡ ಮೋರಿಸ್ ಅವರನ್ನು ಖರೀದಿಸಿದೆ. ಇತ್ತ 14.25 ಕೋಟಿಗೆ ಬೆಂಗಳೂರು ತಂಡ ಗ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದೆ.
ಈ ಹಿಂದೆ 2015 ರಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್‌ಡೇವಿಲ್ಸ್ ತಂಡ 16 ಕೋಟಿ ರೂ. ನೀಡಿ ಖರೀದಿಸಿತ್ತು. ಈಗ ಮೋರಿಸ್ ಅವರು ಐಪಿಎಲ್ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ. ಈ ಬಾರಿಯ ಬಿಡ್‍ನಲ್ಲಿ ಮೋರಿಸ್ ಅವರಿಗೆ 75 ಲಕ್ಷ ರೂ. ಮೂಲ ಬೆಲೆ ನಿಗದಿಯಾಗಿತ್ತು.
14ನೇ ಆವೃತ್ತಿಯ ಐಪಿಎಲ್ ಹರಾಜು ಇಂದು ಚೆನ್ನೈನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾದ ಸ್ಟಾರ್ ಆಲ್‍ರೌಂಡರ್ ಮ್ಯಾಕ್ಸ್‌ವೆಲ್ ಖರೀದಿಸಲು ಚೆನೈ ಸೂಪರ್ ಕಿಂಗ್ಸ್, ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಆರ್‌ಸಿಬಿ ತಂಡ ತೀವ್ರ ಪೈಪೋಟಿಗೆ ಬಿದ್ದಿತ್ತು. ಅಂತಿಮವಾಗಿ ಆರ್‌ಸಿಬಿ 14.25 ಕೋಟಿ ರೂ. ದುಬಾರಿ ಮೊತ್ತ ನೀಡಿ ಖರೀದಿಸಿದೆ.
ಮ್ಯಾಕ್ಸ್‌ವೆಲ್ ಕಳೆದ ಬಾರಿ 10.75 ಕೋಟಿ ರೂಪಾಯಿಗೆ ಪಂಜಾಬ್ ತಂಡದ ಪಾಲಾಗಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೊರದ ಕಾರಣ ಈ ಬಾರಿ ತಂಡದಿಂದ ಅವರನ್ನು ಕೈಬಿಡಲಾಗಿತ್ತು.
14ನೇ ಆವೃತ್ತಿಯ ಐಪಿಎಲ್ ಹರಾಜಿನಲ್ಲಿ ಹೆಚ್ಚು ಬೇಡಿಕೆಯ ಆಟಗಾರನಾಗಿ ಕಂಡುಬಂದಿದ್ದ ಮ್ಯಾಕ್ಸ್‌ವೆಲ್ ಎಬಿಡಿ ವಿಲಿಯರ್ಸ್ ಜೊತೆ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಅವರ ಆಸೆಯಂತೆ ಆರ್‌ಸಿಬಿ ತಂಡ ಖರೀದಿಸಿದೆ.