– 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ
ನವದೆಹಲಿ: ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ನಾನು ಬಯಸುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ಮುಖ್ಯ ಕೋಚ್ ಕನ್ನಡಿಗ ಅನಿಲ್ ಕುಂಬ್ಳೆ ಅವರು ಹೇಳಿದ್ದಾರೆ.
ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಯುಎಇ ತಲುಪಿರುವ ಎಲ್ಲ ತಂಡಗಳು ಖಾಲಿ ಮೈದಾನದಲ್ಲಿ ಆಡಲು ಭರ್ಜರಿ ಸಿದ್ಧತೆ ನಡೆಸಿವೆ. ಅಂತಯೇ ಕಿಂಗ್ಸ್ ಇಲೆವೆನ್ ತಂಡ ಕೂಡ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ತಾಲೀಮು ಮಾಡುತ್ತಿದೆ. ಈ ವೇಳೆ ಅನ್‍ಲೈನ್ ಸಂವಾದದಲ್ಲಿ ಮಾತನಾಡಿರುವ ಅನಿಲ್, 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರೆ ಎಂದು ಹೇಳಿದ್ದಾರೆ.
ಈ ಸಂವಾದ ಕಾರ್ಯಕ್ರಮದಲ್ಲಿ ಕೋಚ್‍ಗಳ ಬಗ್ಗೆ ಮಾತನಾಡಿರುವ ಅವರು, ನಾನು ಐಪಿಎಲ್‍ನಲ್ಲಿ ಹೆಚ್ಚು ಭಾರತೀಯ ಮುಖ್ಯ ಕೋಚ್‍ಗಳನ್ನು ನೋಡಲು ಬಯಸುತ್ತೇನೆ. ಆದರೆ ವಿಪರ್ಯಾಸ ಎಂಬಂತೆ ನಮ್ಮ ಐಪಿಎಲ್‍ನಲ್ಲಿ ಭಾರತೀಯರಿಗಿಂತ ವಿದೇಶಿಗರೇ ಮುಖ್ಯ ಕೋಚ್ ಆಗಿರುತ್ತಾರೆ. ಭಾರತೀಯರು ಕೋಚ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ. ಮುಂದಿನ ದಿನಗಳಲ್ಲಿ ನಮ್ಮವರೇ ಹೆಚ್ಚು ಮುಖ್ಯ ಕೋಚ್‍ಗಳು ಆಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ 40 ವರ್ಷದ ಗೇಲ್ ತಂಡದಲ್ಲಿ ಆಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಂಬ್ಳೆ, ಗೇಲ್ ತಂಡದಲ್ಲಿ ಇರುವುದು ಮುಖ್ಯವಾಗುತ್ತದೆ. ಏಕೆಂದರೆ ಗೇಲ್ ಕೇವಲ ಬ್ಯಾಟ್ಸ್ ಮ್ಯಾನ್ ಆಗಿ ಇರುವುದಿಲ್ಲ. ತಂಡದಲ್ಲಿ ಓರ್ವ ಮಾರ್ಗದರ್ಶಕನಾಗಿ, ಅನುಭವಿ ಆಟಗಾರನಾಗಿ ಇರುತ್ತಾರೆ. ಪಂದ್ಯದ ವೇಳೆ ಅವರ ಸಲಹೆಯನ್ನು ಸ್ವೀಕರಿಸಬೇಕಾಗುತ್ತದೆ. ಜೊತೆಗೆ ಟಾಪ್ ಆರ್ಡರ್ ನಲ್ಲಿ ಈಗಲೂ ದೊಡ್ಡ ಹೊಡೆತಗಳಿಗೆ ಗೇಲ್ ಹೆಸರುವಾಸಿ. ಹೀಗಾಗಿ ಅವರು ತಂಡದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.
ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಧೋನಿ ಐಪಿಎಲ್ ಆಡುತ್ತಿರುವ ಬಗ್ಗೆ ಮಾತನಾಡಿದ ಅವರು, ನನಗೆ ಧೋನಿ ಬಗ್ಗೆ ಚೆನ್ನಾಗಿ ಗೊತ್ತಿದೆ. ಆತ ಈ ಬಾರಿ ಐಪಿಎಲ್‍ನಲ್ಲಿ ಚೆನ್ನಾಗಿ ಆಡುತ್ತಾನೆ. ನಾನೂ ಕೂಡ ನಿವೃತ್ತಿ ಹೊಂದಿದ ಬಳಿಕ ಐಪಿಎಲ್ ಆಡಿದ್ದೇನೆ ಎಂದಿದ್ದಾರೆ.
ಭಾರತೀಯರಲ್ಲದ ಮುಖ್ಯ ಕೋಚ್ ಹೊಂದಿರುವ ಐಪಿಎಲ್ ತಂಡಗಳು
ರಿಕಿ ಪಾಂಟಿಂಗ್ (ದೆಹಲಿ ಕ್ಯಾಪಿಟಲ್ಸ್), ಬ್ರೆಂಡನ್ ಮೆಕಲಮ್ (ಕೆಕೆಆರ್), ಸ್ಟೀಫನ್ ಫ್ಲೆಮಿಂಗ್ (ಸಿಎಸ್‍ಕೆ), ಮಹೇಲಾ ಜಯವರ್ಧನೆ (ಮುಂಬೈ ಇಂಡಿಯನ್ಸ್), ಟ್ರೆವರ್ ಬೇಲಿಸ್ (ಸನ್‍ರೈಸರ್ಸ್), ಸೈಮನ್ ಕ್ಯಾಟಿಚ್ (ಆರ್.ಸಿ.ಬಿ) ಆಂಡ್ರ್ಯೂ ಮೆಕ್‍ಡೊನಾಲ್ಡ್ (ರಾಜಸ್ಥಾನ್ ರಾಯಲ್ಸ್). ಪಂಜಾಬ್ ತಂಡಕ್ಕೆ ಮಾತ್ರ ಭಾರತೀಯರಾದ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದಾರೆ.