ಗಾಂಧಿನಗರ: ರಾಜಸ್ಥಾನ ರಾಯಲ್ಸ್ ತಂಡ ಯುವ ವೇಗಿ ಚೇತನ್ ಸಕಾರಿಯಾ ತನ್ನ ತಂದೆಯ ಕೊರೊನಾ ಚಿಕಿತ್ಸೆಗಾಗಿ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣವನ್ನು ವ್ಯಯಿಸುತ್ತಿರುವುದಾಗಿ ತಿಳಿಸಿದ್ದಾರೆ.
23 ವರ್ಷ ವಯಸ್ಸಿನ ಎಡಗೈ ವೇಗಿ ಚೇತನ್ ಸಕಾರಿಯಾ ಅವರನ್ನು 1.2 ಕೋಟಿ ರೂಪಾಯಿ ನೀಡಿ ರಾಜಸ್ಥಾನ ತಂಡ ಐಪಿಎಲ್‍ನಲ್ಲಿ ಖರೀದಿ ಮಾಡಿತ್ತು. ಅದರಂತೆ 14ನೇ ಆವೃತ್ತಿಯ ಐಪಿಎಲ್‍ನ ಕೆಲಪಂದ್ಯಗಳಲ್ಲಿ ರಾಜಸ್ಥಾನ ತಂಡದ ಪರ ಸಕಾರಿಯಾ ಕಾಣಿಸಿಕೊಂಡಿದ್ದರು.
ಸಕಾರಿಯಾ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳುವ ಮುಂಚೆ ಸೌರಷ್ಟ್ರ ತಂಡದ ಪರ ಆಡುತ್ತಿದ್ದರು. ಹಲವು ಅಡೆತಡೆಗಳನ್ನು ಮೆಟ್ಟಿನಿಂತು ಕ್ರಿಕೆಟ್‍ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಸಕಾರಿಯಾ ಐಪಿಎಲ್‍ಗೂ ಕೆಲದಿನಗಳ ಹಿಂದೆ ತನ್ನ ಸಹೋದರನ ಮರಣದಿಂದ ಕುಗ್ಗಿದ್ದರು. ಬಳಿಕ ಐಪಿಎಲ್‍ನಲ್ಲಿ ರಾಜಸ್ಥಾನ ತಂಡದ ಪರ ಉತ್ತಮ ಪ್ರದರ್ಶನ ತೋರಿ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ನಂತರ ಐಪಿಎಲ್ ಅರ್ಧದಲ್ಲಿ ಸ್ಥಗಿತಗೊಂಡು ಮನೆಗೆ ಸಕಾರಿಯಾ ಹಿಂದಿರುಗುತ್ತಿದ್ದಂತೆ ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಸಂದರ್ಭ ತನಗೆ ಐಪಿಎಲ್‍ನಲ್ಲಿ ರಾಜಸ್ಥಾನ ತಂಡ ನೀಡಿದ ಹಣದಿಂದಾಗಿ ಇದೀಗ ಗುಜರಾತ್‍ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ಚೇತನ್ ಸಕಾರಿಯಾ, ನಾನು ತುಂಬಾ ಅದೃಷ್ಟಶಾಲಿ ಯಾಕೆಂದರೆ ಐಪಿಎಲ್‍ನಲ್ಲಿ ಆಡಿದ್ದಕ್ಕಾಗಿ ರಾಜಸ್ಥಾನ ಫ್ರಾಂಚೈಸಿ ನನಗೆ ಹಣ ಕೊಟ್ಟಿದೆ. ಅ ಹಣವನ್ನು ಇದೀಗ ನಾನು ನನ್ನ ಕುಟುಂಬದ ಕಷ್ಟ ಕಾಲದ ನೆರವಿಗಾಗಿ ಬಳಸುತ್ತಿದ್ದೇನೆ ಎಂದಿದ್ದಾರೆ.
ಇದೀಗ ನನ್ನ ಬಳಿ ಹಣ ಇರುವುದರಿಂದಾಗಿ ನಾನು ನನ್ನ ತಂದೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮವಾದ ಆಸ್ಪತ್ರೆ ಸೇರಿಸಿದ್ದೇನೆ. ನಮ್ಮದು ಬಡ ಕುಟುಂಬ. ನನ್ನ ಅಮ್ಮನಿಗೆ ಕೋಟಿಗೆ ಎಷ್ಟು ಸೊನ್ನೆ ಎಂಬುದೆ ಗೊತ್ತಿಲ್ಲ, ಆದರೆ ಇದೀಗ ನಾನು ಕೋಟಿ ರೂಪಾಯಿ ಸಂಪಾದನೆ ಮಾಡಿದ್ದೇನೆ. ಇದೆಲ್ಲ ಸಿಕ್ಕಿದ್ದು ಐಪಿಎಲ್‍ನಿಂದಾಗಿ ಎಂದು ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.