ಹಾಸನ: ಒಂದು ದಿನದ ಅಂತರದಲ್ಲಿ ಐದು ಸಿಂಧಿ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ಹಾಸನದ ವಿದ್ಯಾನಗರದಲ್ಲಿ ನಡೆದಿದೆ.
ಪುನೀತ್ ಅವರು ಸಿಂಧಿ ಹಸುಗಳನ್ನು ಸಾಕಿಕೊಂಡು ಹಾಲು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಹಸುಗಳನ್ನು ಮನೆಯ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಕಟ್ಟುತ್ತಿದ್ದರು. ಶನಿವಾರ ಕೆಲಸದ ನಿಮಿತ್ತ ಬೆಂಗಳೂರಿಗೆ ಪುನೀತ್ ತೆರಳಿದ್ದರು. ಅಂದು ಸಂಜೆ ಪುನೀತ್ ತಾಯಿ ಹಾಲು ಕರೆದು ಎಲ್ಲಾ ಹಸುಗಳನ್ನು ಕಟ್ಟದೇ ಖಾಲಿ ನಿವೇಶನದಲ್ಲಿ ಕೂಡಿ ಹಾಕಿದ್ದರು.
ಬೆಳಿಗ್ಗೆ ಆಗುವುದರೊಳಗೆ ಮೂರು ಹಸುಗಳು ಕಾಣಿಯಾಗಿದ್ದವು. ನಂತರ ಎಲ್ಲೆಡೆ ಹುಡುಕಿದರೂ ಹಸುಗಳು ಪತ್ತೆಯಾಗಿಲ್ಲ. ಭಾನುವಾರ ರಾತ್ರಿ ಮತ್ತೆ ಎರಡು ಹಸುಗಳು ಕಾಣಿಯಾಗಿದ್ದು, ಹಸುಗಳನ್ನು ಕಳ್ಳತನ ಮಾಡಿರುವುದು ತಿಳಿದಿದೆ. ನಂತರ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಮನೆ ಸಮೀಪವಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಮೂರು ಲಕ್ಷ ಬೆಲೆಬಾಳುವ ಸಿಂಧಿ ಹಸುಗಳನ್ನು ಕಳೆದುಕೊಂಡು ಪುನೀತ್ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.