ಹಾವೇರಿ: ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲವು ಜಿಲ್ಲೆಗಳು ಸ್ವಯಂ ಲಾಕ್‍ಡೌನ್ ಘೋಷಣೆ ಮಾಡಿ ಕಠಿಣ ರೂಲ್ಸ್ ಜಾರಿಗೆ ಮುಂದಾಗಿವೆ. ಅದೇ ರೀತಿ ಜಿಲ್ಲೆಯಲ್ಲಿ ಸಹ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಐದು ದಿನಗಳ ಕಾಲ ಮತ್ತಷ್ಟು ಟಫ್ ರೂಲ್ಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.
ಮೇ 21ರ ಬೆಳಗ್ಗೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 6 ಗಂಟೆಯವರೆಗೆ ಟಫ್ ರೂಲ್ಸ್ ಜಾರಿಯಲ್ಲಿರುತ್ತದೆ. ಹಾಲು, ಔಷಧಿ, ಆಸ್ಪತ್ರೆ, ಅಂಬುಲೆನ್ಸ್, ಪೆಟ್ರೋಲ್ ಪಂಪ್, ಅಗ್ನಿಶಾಮಕ, ಆಕ್ಸಿಜನ್ ಉತ್ಪಾದನಾ ಘಟಕ ಮತ್ತು ಎಟಿಎಂ ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮೇ 23ರಂದು ಮಾತ್ರ ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ತರಕಾರಿ ಮತ್ತು ದಿನಸಿ ಅಂಗಡಿಗಳಿಗೆ ಅವಕಾಶ ನೀಡಿದ್ದು, ಐದು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಟಫ್ ರೂಲ್ಸ್ ಮಾಡಿ ಆದೇಶ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಂದು 170ಕ್ಕೂ ಅಧಿಕ ಜನರಲ್ಲಿ ಸೋಂಕು ದೃಢಪಟ್ಟಿದ್ದು, 11 ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 363 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಒಟ್ಟು 17,044 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇನ್ನೂ 1,543 ಸಕ್ರಿಯ ಪ್ರಕರಣಗಳಿವೆ. ಹೀಗಾಗಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಜಾರಿಗೆ ಮಾಡಿದ್ದು, ಐದು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿದೆ.