ಧಾರವಾಡ/ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ ಇದೀಗ ರೈಲಿನ ಇತಿಹಾಸವನ್ನು ಸಾರಿ ಹೇಳಲು ಸಜ್ಜಾಗಿದೆ. ರೈಲ್ವೆಯ ಗತವೈಭವವನ್ನು ಪ್ರಜ್ವಲಿಸುವಂತೆ ಮಾಡಲು ಮ್ಯೂಸಿಯಂ ಸನ್ನದ್ಧವಾಗುತ್ತಿದೆ.
Advertisement
ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸದುದ್ದೇಶದಿಂದ ಹುಬ್ಬಳ್ಳಿಯಲ್ಲಿ ರೈಲ್ವೆ ಮ್ಯೂಸಿಯಂ ಸಿದ್ಧಗೊಳ್ಳುತ್ತಿದೆ. ಇಲ್ಲಿನ ಗದಗ ರಸ್ತೆಯ ರೈಲ್ವೆ ನಿಲ್ದಾಣದ ಎರಡನೇ ಗೇಟ್ ಪಕ್ಕ ಸುಮಾರು 3,500 ಚದರ ಮೀಟರ್ ವ್ಯಾಪ್ತಿಯಲ್ಲಿ ನೈಋತ್ಯ ರೈಲ್ವೆ ವಲಯ ಮ್ಯೂಸಿಯಂ ನಿರ್ಮಿಸುತ್ತಿದೆ. ಎರಡು ಹಳೆಯ ಕಟ್ಟಡಗಳಿದ್ದ ಜಾಗದಲ್ಲೇ ಈ ವಸ್ತುಸಂಗ್ರಹಾಲಯ ನಿರ್ಮಿತವಾಗಿದೆ.
Advertisement
Advertisement
ರೈಲಿನ ಇತಿಹಾಸವನ್ನು ವಿವಿಧ ರೂಪಗಳಲ್ಲಿ ಈ ವಸ್ತು ಸಂಗ್ರಹಾಲಯ ತೆರೆದಿಟ್ಟಿದೆ. ರೈಲು ಆರಂಭವಾದಾಗಿನಿಂದ ಇಲ್ಲಿವರೆಗೂ ಆಗಿರುವ ಬದಲಾವಣೆಗಳು, ತಂತ್ರಜ್ಞಾನದ ಜೊತೆ ರೈಲ್ವೆ ವಿಭಾಗವೂ ಬೆಳೆದು ಬಂದ ಬಗೆ, ವಿವಿಧ ರೀತಿಯ ರೈಲುಗಳು, ಬೋಗಿಗಳು, ಹಳೆಯ ಕಾಲದ ಸಿಗ್ನಲ್‍ಗಳು, ವಿದ್ಯುತ್ ಉಪಕರಣಗಳು, ಪ್ರಸ್ತುತ ರೈಲ್ವೆ ಮಾದರಿಗಳು, ಹೊಸ ತಂತ್ರಜ್ಞಾನಗಳ ಹಂತ ಹಂತದ ಬೆಳವಣಿಗೆಗಳು ಇವೆಲ್ಲವೂ ಮ್ಯೂಸಿಯಂನಲ್ಲಿವೆ. ರೈಲಿನ ಹಿನ್ನೆಲೆಯನ್ನು ತಿಳಿಸುವ ಪುಸ್ತಕ, ಛಾಯಾಚಿತ್ರಗಳೂ ಇವೆ.
Advertisement
ಪ್ರಸ್ತುತ ದೇಶದಲ್ಲಿ ಭಾರತೀಯ ರೈಲ್ವೆಯ 11 ವಸ್ತು ಸಂಗ್ರಹಾಲಯಗಳಿದ್ದು, ಹುಬ್ಬಳ್ಳಿಯ ಈ ವಸ್ತು ಸಂಗ್ರಹಾಲಯ ದೇಶದ 12ನೇ ಹಾಗೂ ಕರ್ನಾಟಕದ ಎರಡನೇ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರು ರೈಲ್ವೆ ಮ್ಯೂಸಿಯಂ ಮೊದಲ ಮ್ಯೂಸಿಯಂ ಆಗಿದೆ.
ಒಟ್ಟಿನಲ್ಲಿ ಸಾರ್ವಜನಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಭಾರತೀಯ ರೈಲ್ವೆ ಇಲಾಖೆಯ ಎಲ್ಲ ರೀತಿಯ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಸದುದ್ದೇಶದಿಂದ ನೈಋತ್ಯ ರೈಲ್ವೆ ಇಲಾಖೆ ಮ್ಯೂಸಿಯಂ ಸಿದ್ಧಪಡಿಸಿದ್ದು, ಉತ್ತಮ ಕಾರ್ಯನಿರ್ವಹಣೆಯಿಂದ ಜನಮನ್ನಣೆ ಪಡೆಯುತ್ತಿದೆ.