ಹಾಸನ: ಐಎಂಎ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಶಾಸಕರೊಬ್ಬರು ಇಫ್ತಿಯಾರ್ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹಾಕಿ ಆದಾಯ ತೆರಿಗೆ ಕಟ್ಟಿದ್ದೇನೆ ಎಂದಿದ್ದರು. ದಾಳಿ ನಡೆದ ಬಳಿಕ ಫೋಟೋವನ್ನು ತೆಗೆದಿರಬಹುದು. ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಯಾವುದೇ ತನಿಖೆಗೆ ನಾನು ಸಿದ್ಧವಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯದೇ ಕೆಳಸ್ತರಗಳಲ್ಲಿ ಇರುವಂತಹ ಸಮುದಾಯಕ್ಕೆ ಮೀಸಲಾತಿ ಕೊಡುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢವನ್ನಾಗಿ ಮಾಡುವಂತಹ ಕಾರ್ಯ. ಸಮಾಜದ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಚಿಂತನೆ ನಡೆಸಿ ಮೀಸಲಾತಿ ಕೊಡುವುದು ಸರ್ಕಾರದ ಜವಾಬ್ದಾರಿ. ಆದರೆ ಮಠಾಧೀಶರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತಹ ಪರಿಸ್ಥಿತಿಗೆ ತಂದುಕೊಂಡಿದ್ದು ತಪ್ಪು ಎನ್ನುವುದು ನನ್ನ ಅಭಿಪ್ರಾಯ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ಈಗ ಮೀಸಲಾತಿಗಾಗಿ ಹೋರಾಟ ಮಾಡುತ್ತೇನೆ ಎನ್ನುವುದು ಎಷ್ಟು ಸರಿ ಎನ್ನುವುದನ್ನು ಅವರೇ ಚಿಂತನೆ ಮಾಡಬೇಕು ಎಂದು ಟಾಂಗ್ ನೀಡಿದರು.