ಏಳನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್

Public TV
1 Min Read
Nitish Kumar

– ಬಿಹಾರಕ್ಕೆ ಬಿಜೆಪಿಯ ಇಬ್ಬರು ಡಿಸಿಎಂ

ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಏಳನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಪಾಟ್ನಾ ರಾಜಭವನದೊಳಗೆ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಬಿಹಾರದ ಗದ್ದುಗೆ ಏರಿದ್ದಾರೆ.

ಇನ್ನು ಬಿಜೆಪಿಯ ತರ್ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ತರ್ಕಿಶೋರ್ ಪ್ರಸಾದ್ ಕಟಿಹಾರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸುಶೀಲ್ ಮೋದಿ ಅವರ ಆಪ್ತರಲ್ಲಿ ಒಬ್ಬರು. ರೇಣು ದೇವಿಯವರು ಬೇತಿಯಾ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದು, ಕಳೆದ ನಿತೀಶ್ ಕುಮಾರ್ ಸಂಪುಟದಲ್ಲಿ ಸಚಿವೆಯಾಗಿದ್ದರು.

ಜೆಡಿಯು ನಾಯಕರಾದ ವಿಜಯ್ ಕುಮಾರ್ ಚೌಧರಿ, ವಿಜೇಂದ್ರ ಪ್ರಸಾದ್ ಯಾದವ್, ಅಶೋಕ್ ಚೌಧರಿ ಮತ್ತು ಮೇವಾ ಲಾಲ್ ಚೌಧರಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ ಹಿಂದೂಸ್ಥಾನಿ ಅವಮ್ ಮೋರ್ಛಾದ ಸಂತೋಷ್ ಕುಮಾರ್ ಸುಮನ್ ಮತ್ತು ವಿಕಾಸಶೀಲ ಇನ್ಸಾನ್ ಪಾರ್ಟಿಯ ಮುಖೇಶ್ ಸಹನಿ, ಬಿಜೆಪಿಯ ಮಂಗಲ್ ಪಾಂಡೆ, ಅಮರೇಂದ್ರ ಪ್ರತಾಪ್ ಸಿಂಗ್ ಸಹ ನಿತೀಶ್ ಸಂಪುಟ ಸೇರ್ಪಡೆಯಾದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಉಪಸ್ಥಿತರಿದ್ದರು. ತೇಜಸ್ವಿ ಯಾದವ್ ಸೇರಿದಂತೆ ಮಹಾಘಟನಬಂಧನ ನಾಯಕರು ಗೈರಾಗಿದ್ದರು. ಎರಡೂ ದಿನಗಳಿಂದ ಮನೆಯಿಂದ ಹೊರ ಬಾರದ ತೇಜಸ್ವಿ ಯಾದವ್ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣಾ ಪ್ರಕ್ರಿಯೆ ಕುರಿತು ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *