ನವದೆಹಲಿ: ಭಾರತದ ಅತೀ ದೊಡ್ಡ ಕ್ರೀಡಾ ಜಾತ್ರೆ 2021ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ20 ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ಸಿದ್ಧತೆಯಲ್ಲಿ ತೊಡಗಿದೆ. ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಸಿಸಿಐ ಸಿದ್ಧಪಡಿಸಿಕೊಂಡಿದೆ ಎಂಬ ಸುದ್ದಿಯು ಹರಿದಾಡುತ್ತಿದೆ.
ಬಿಸಿಸಿಐ ಕಳೆದ ವರ್ಷ ಕೋವಿಡ್-19ನಿಂದಾಗಿ ಯುಎಇನಲ್ಲಿ 13ನೇ ಆವೃತ್ತಿಯ ಐಪಿಎಲ್ ಆಯೋಜನೆ ಮಾಡಿತ್ತು. ಆದರೆ ಈ ಬಾರಿ ಭಾರತದಲ್ಲೇ ನಡೆಸಲು ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಕೆಲ ವರದಿಯ ಪ್ರಕಾರ ಬಿಸಿಸಿಐ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಏಪ್ರಿಲ್ 11ರಿಂದ ಟೂರ್ನಿ ಆರಂಭಗೊಳ್ಳಲಿದೆ, ಆದರೆ ಅಂತಿಮ ನಿರ್ಧಾರ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದು ವರದಿ ಆಗಿದೆ. ಈಗಿನ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಏ 11ಕ್ಕೆ ಐಪಿಎಲ್ ಪ್ರಾರಂಭಗೊಂಡು ಜೂ.4 ಇಲ್ಲವೇ ಜೂ.5ಕ್ಕೆ ಫೈನಲ್ ಕಾದಾಟ ಮೂಲಕ ಮುಕ್ತಾಯಗೊಳ್ಳಲಿದೆ. ಮುಂಬೈ ಮತ್ತು ಪುಣೆ ಕ್ರೀಡಾಂಗಣಗಳು ಲೀಗ್ ಹಂತದ ಹೋರಾಟಕ್ಕೆ ಸಾಕ್ಷಿಯಾಗಲಿದ್ದು, ಅಹಮದಾಬಾದ್‍ನ ಮೊಟೇರಾ ಕ್ರೀಡಾಂಗಣದಲ್ಲಿ ಪ್ಲೇ-ಆಫ್ ಆಯೋಜನೆಯ ನಿರೀಕ್ಷೆ ಇದೆ.
ಇಂಗ್ಲೆಂಡ್ ಮತ್ತು ಭಾರತ ನಡುವಿನ ಸರಣಿ ಮಾರ್ಚ್ 28ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ಐಪಿಎಲ್ ಆರಂಭಕ್ಕೂ ಮುನ್ನ ಈಗಿನ ವೇಳಾಪಟ್ಟಿಯ ಪ್ರಕಾರ ಆಟಗಾರರಿಗೆ 2 ವಾರಗಳ ವಿಶ್ರಾಂತಿ ಸಿಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2021ರ ಐಪಿಎಲ್‍ನ ಲೀಗ್ ಹಂತಕ್ಕೆ 5 ಕ್ರೀಡಾಂಗಣಗಳನ್ನು ಬಳಸಿಕೊಳ್ಳುವ ಯೋಜನೆ ಇದ್ದು, ಮುಂಬೈನಲ್ಲಿರುವ 4 ಕ್ರೀಡಾಂಗಣಗಳಲ್ಲಿ ಲೀಗ್ 56 ಪಂದ್ಯಗಳನ್ನು ನಡೆಸಿ, ನಂತರ ಪ್ಲೇ ಆಫ್ ಹಂತದ 4 ಪಂದ್ಯಗಳನ್ನು ಅಹಮದಾಬಾದ್‍ನ ಮೊಟೇರಾ ಕ್ರೀಡಾಂಗಣದಲ್ಲಿ ನಡೆಸಲು ಪ್ಲಾನ್ ಸಿದ್ಧವಾಗಿದೆ.