ಬೆಂಗಳೂರು: ಇಂದು ಮಧ್ಯಾಹ್ನ 1.25ರ ವೇಳೆಗೆ ಬೆಂಗಳೂರಿನ ಹಲವೆಡೆ ಬಾರೀ ದೊಡ್ಡ ಶಬ್ಧ ಕೇಳಿಸಿದೆ. ಆರಂಭದಲ್ಲಿ ಈ ಶಬ್ಧ ಕೇಳಿಸಿದಾಗ ಇದರ ಮೂಲ ತಿಳಿಯಲಿಲ್ಲ. ಆದರೆ ಈಗ ಇದು ಸುಖೋಯ್ ಯುದ್ಧವಿಮಾನದ್ದು ಆಗಿರಬಹುದು ಎಂದು ವಿಂಗ್ ಕಮಾಂಡರ್ ಸುದರ್ಶನ್ ಹೇಳಿದ್ದಾರೆ.
ಮಧ್ಯಾಹ್ನ 1.20ರ ಸಮಯದಲ್ಲಿ ಬೆಂಗಳೂರಿನಲ್ಲಿ ಕೇಳಿಸಿಕೊಂಡದ್ದು ಸುಖೋಯ್ ವಿಮಾನದ ಸೋನಿಕ್ ಬೂಮ್. ಫೈಟರ್ ವಿಮಾನ 1,230 ಕಿ.ಮೀ ವೇಗ ತಲುಪಿ ಹೀಗೆ ಆಗಿತ್ತು ಎಂದು ಸುದರ್ಶನ್ ಅವರು ಫೇಸ್‍ಬುಕ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾರೆ.
https://www.facebook.com/sudarshan.badangod/posts/10158767833629645
ಜನಪ್ರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ, ನೀವು ಕೇಳಿದ್ದು, ಸೂಪರ್ ಸೋನಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟದ ಸದ್ದು. ಗುಡುಗುಗಿಂತಲೂ ತೀವ್ರ ಎಂದು ಸ್ಟೇಟಸ್ ಅಪ್‍ಡೇಟ್ ಮಾಡಿದ್ದಾರೆ.
https://www.facebook.com/sudhindra.haldodderi/posts/10223254388526344
ಏನಿದು ಸೂಪರ್ ಸೋನಿಕ್ ಬೂಮ್?
ಸಮುದ್ರ ಮಟ್ಟದಲ್ಲಿ ಶಬ್ದಗಳ ತರಂಗಗಳ ವೇಗ ಸುಮಾರು ಗಂಟೆಗೆ 1,235 ಕಿಮೀ ಇರುತ್ತದೆ. ಮೇಲೆ ಮೇಲೆ ಹಾರುತ್ತಾ ಏರಿದಾಗ ಈ ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ಈ ವೇಗವನ್ನು ಒಂದು ಮ್ಯಾಕ್ ಎನ್ನುತ್ತಾರೆ. ನಮ್ಮ ಫೈಟರ್ ವಿಮಾನಗಳು ಈ ವೇಗದ ಆಸುಪಾಸಿನಲ್ಲಿ ಹಾರಾಡುತ್ತಿರುವಾಗ ಗಾಳಿಯ ಹಲವಾರು ಪದರಗಳು ಒಂದರ ಮೇಲೆ ಒಂದರಂತೆ ಏರುತ್ತಾ ಹೋಗುತ್ತವೆ. ಈ ವಿಮಾನದ ವೇಗ ಒಂದು ಮ್ಯಾಕ್‍ಗಿಂತಾ ಹೆಚ್ಚಾದಾಗ ಈ ವಾಯು ಪದರಗಳನ್ನು ಸೀಳಿಕೊಂಡು ಮುನ್ನುಗ್ಗುತ್ತವೆ. ಆಗ ವಿಮಾನದ ಹಿಂದೆ ಉಂಟಾದ ನಿರ್ವಾತದಲ್ಲಿ ಅಪ್ಪಳಿಸಿದಾಗ ಉಂಟಾಗುವ ಶಬ್ಧವೇ ಸೂಪರ್ ಸೋನಿಕ್ ಬೂಮ್ ಎಂದು ವಿಂಗ್ ಕಮಾಂಡರ್ ಸುದರ್ಶನ್ ತಿಳಿಸಿದ್ದಾರೆ.
ಸೂಪರ್ ಸೋನಿಕ್ ವೇಗವನ್ನು ಮ್ಯಾಕ್ ಸಂಖ್ಯೆಯಲ್ಲಿ ಹೇಳಲಾಗುತ್ತದೆ. ಮ್ಯಾಕ್ 1 ಎಂದರೆ ಧ್ವನಿಯ ವೇಗ, ಮ್ಯಾಕ್ 2 ಆ ವೇಗದ ಎರಡರಷ್ಟು. ವಿಮಾನದ ಎತ್ತರದಲ್ಲಿನ ಧ್ವನಿಯ ವೇಗದಿಂದ ವಿಮಾನದ ವೇಗವನ್ನು ವಿಭಜಿಸುವುದರಿಂದ ಮ್ಯಾಕ್ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ಯುದ್ಧ ವಿಮಾನಗಳ ವಾಯುನೆಲೆಯಲ್ಲಿ ಸೂಪರ್ ಸೋನಿಕ್ ಬೂಮ್ ಸಾಮಾನ್ಯ. ಬಹಳಷ್ಟು ಸಲ ಕಿಟಕಿಯ ಗಾಜುಗಳು ಒಡೆದು ಹೋಗುತ್ತದೆ.