ಬೆಂಗಳೂರು: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎಸ್‍ಡಿಪಿಐ, ಪಿಎಫ್‍ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ದಾಳಿ ನಡೆಸಿದೆ.
ನಾಲ್ಕು ಎಸ್‍ಡಿಪಿಐ ಕಚೇರಿ ಮತ್ತು ಪಿಎಫ್‍ಐ ಕಚೇರಿ ಸೇರಿದಂತೆ ಬೆಂಗಳೂರು ನಗರದ 43 ಕಡೆ ಎನ್‍ಐಎ ದಾಳಿ ನಡೆಸಿದೆ. ದಾಳಿ ವೇಳೆ ಎಸ್‍ಡಿಪಿಐ ಮತ್ತು ಪಿಎಫ್‍ಐ ಗೆ ಸೇರಿದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ದಾಳಿಯ ಕೆಲ ಸ್ಥಳಗಳಲ್ಲಿ ಚಾಕು, ಕಬ್ಬಿಣದ ರಾಡ್ ಸೇರಿದಂತೆ ಹಲವು ಆಯುಧಗಳನ್ನ ತನಿಖಾ ಸಂಸ್ಥೆ ವಶಕ್ಕೆ ಪಡೆದು ಎಂದು ತಿಳಿದು ಬಂದಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಭಯದ ವಾತಾವರಣ ಉಂಟು ಮಾಡುವ ಉದ್ದೇಶದಿಂದ ಗಲಭೆಕೋರರು ಗಲಾಟೆ ಆರಂಭಿಸಿದ್ದರು. ಮಾರಾಕಸ್ತ್ರಗಳ ಮೂಲಕ ಪೊಲೀಸರು, ಸಾರ್ವಜನಿಕ ಆಸ್ತಿ ಪಾಸ್ತಿ, ಖಾಸಗಿ ಆಸ್ತಿ ಪಾಸ್ತಿ, ವಾಹನಗಳು, ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದರು. ಇದೇ ಗಲಭೆಯಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಇಡಲಾಗಿತ್ತು. ಗಲಭೆ ಪ್ರಕರಣದ 52ನೇ ಆರೋಪಿ ಸಂಪತ್ ರಾಜ್ ನನ್ನು ಸೋಮವಾರ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿ ತಮ್ಮ ವಶಕ್ಕೆ ಪಡೆದುಕೊಂಡು ಡ್ರಿಲ್ ನಡೆಸುತ್ತಿದ್ದಾರೆ.