ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ – ಸಿದ್ದು ಪ್ರಶ್ನೆ

Public TV
2 Min Read
Siddu 111

ಬೆಂಗಳೂರು: ಮುಸ್ಲಿಂ ಸಂಘಟನೆಯಾದ ಎಸ್‍ಡಿಪಿಐ ನಿಷೇಧಿಸುವ ಧೈರ್ಯ ಬಿಜೆಪಿಗೆ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಕಾವಲ್ ಭೈರಸಂದ್ರ ಗಲಭೆಯ ತನಿಖೆಯ ಹಾದಿ ತಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ದಿನಕ್ಕೊಬ್ಬ ಸಚಿವರು, ಶಾಸಕರು ಭೇಟಿ ನೀಡಿ, ಗಲಭೆಗೆ ಎಸ್‍ಡಿಪಿಐ, ಕಾಂಗ್ರೆಸ್, ಭಯೋತ್ಪಾದಕರು ಕಾರಣ ಎಂದು ನೀಡುತ್ತಿರುವ ತರಹೇವಾರಿ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇಂದು ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿ, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಗಲಭೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಹಚ್ಚುವುದಕ್ಕಿಂತ ಹೆಚ್ಚು ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿಲುಕಿಸುವುದು ಹೇಗೆ? ಇದನ್ನು ಕೋಮುಗಲಭೆ ಎಂದು ಬಣ್ಣಿಸಿ ರಾಜಕೀಯ ಲಾಭ ಗಳಿಸುವುದು ಹೇಗೆ? ಎನ್ನುವ ಬಗ್ಗೆ ಬಿಜೆಪಿ ಪಕ್ಷದ ನಾಯಕರು ತಲೆಕೆಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಜೊತೆಗೆ ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ. ಯಡಿಯೂರಪ್ಪ ಅವರ ಪದಚ್ಯುತಿಗೆ ಕೆಲವು ಆರ್‍ಎಸ್‍ಎಸ್ ಸಮೀಪವರ್ತಿ ನಾಯಕರು ನಡೆಸುತ್ತಿರುವ ಪ್ರಯತ್ನಕ್ಕೆ ಕೆಜೆಹಳ್ಳಿ-ಡಿಜೆಹಳ್ಳಿ ಪ್ರಕರಣವನ್ನು ಯಥೇಚ್ಚವಾಗಿ ಬಳಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಅತ್ಯಧಿಕ ಮತಗಳಿಸಿ ಆಯ್ಕೆಯಾಗಿರುವ ನಮ್ಮದೇ ಪಕ್ಷದ ಶಾಸಕರು ಮತ್ತು ನಮ್ಮ ಪಕ್ಷದ ಕಾರ್ಪೋರೇಟರ್‍ಗಳು ಇರುವಾಗ ಕಾವಲಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇರುವ ಆಸಕ್ತಿಯಾದರು ಏನು? ಅಲ್ಲಿ ಚುನಾವಣೆಯಲ್ಲಿ ಎದುರಿಸಲಾಗದ ರಾಜಕೀಯ ಪಕ್ಷಗಳೇ ಪ್ರಕರಣದ ರಾಜಕೀಯ ಲಾಭ ಪಡೆಯಲು ಹೊರಟಿರುವುದು ಸ್ಪಷ್ಟ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಕಾವಲಭೈರಸಂದ್ರ ಗಲಭೆಯ ನಿಜವಾದ ತನಿಖೆ ಬಿಜೆಪಿ ಸರ್ಕಾರದ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು. ಸರ್ಕಾರದ ಪ್ರಕಾರ ಇದು ಪೂರ್ವಯೋಜಿತ ಕೃತ್ಯವಾಗಿದ್ದರೆ ಅದು ಯಾಕೆ ಪೊಲೀಸರ ಗಮನಕ್ಕೆ ಬಂದಿಲ್ಲ? ಪ್ರಚೋದನಕಾರಿ ಪೋಸ್ಟ್ ಹಾಕಿರುವ ನವೀನ್ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬಕ್ಕೆ ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.

ಎಸ್‍ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಅವರನ್ನು ಶಿಕ್ಷಿಸಿ, ಆ ಸಂಘಟನೆ ತಪ್ಪು ಮಾಡಿದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಿ. ಮುಸ್ಲಿಂ ಮತಗಳನ್ನು ಒಡೆಯಲು ಎಸ್‍ಡಿಪಿಐ ಅನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತಾ ಬಂದಿರುವ ಬಿಜೆಪಿಗೆ ಅದನ್ನು ನಿಷೇಧಿಸುವ ಧೈರ್ಯ ಇದೆಯೇ ಎಂದು ಸವಾಲು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *