ಚಾಮರಾಜನಗರ: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತಂತೆ ಶುಕ್ರವಾರದಿಂದ ಎಸ್‍ಐಟಿ ತನಿಖೆ ಆರಂಭವಾಗಿದೆ. ಸದ್ಯದಲ್ಲೇ ಎಲ್ಲವೂ ಹೊರಬರಲಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿದ ಅವರು, ಸಿಡಿ ಬಗ್ಗೆ ಹೆಚ್ಚಿನ ವಿಚಾರಗಳಿಗೆ ರಮೇಶ್ ಜಾರಕಿಹೊಳಿ ಅವರನ್ನೇ ಕೇಳಬೇಕು ಎಂದಿದ್ದು, ಮಹಾನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರಿಸದೆ ನುಣಚಿಕೊಂಡರು.
ಇದೇ ವೇಳೆ ಮೈಮುಲ್ ಚುನಾವಣೆಗೆ ಮಾಜಿ ಸಿಎಂ ಹೆಚ್.ಡಿ.ಕೆ. ಎಂಟ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಇರಬಾರದು. ಯಾರೋ ಪುಣ್ಯಾತ್ಮರು ಸಹಕಾರಿ ಚಳವಳಿ ಕಟ್ಟಿದ್ದಾರೆ. ಇದರಲ್ಲಿ ರಾಜಕೀಯ ಬೆರೆಸಿ ಹಾಳುಮಾಡುವುದು ಸರಿಯಲ್ಲ. ಸಹಕಾರಿ ಚುನಾವಣೆಯ ವಿಚಾರವನ್ನು ಸ್ಥಳೀಯರಿಗೆ ಬಿಟ್ಟುಬಿಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕೆ.ಗೆ ಟಾಂಗ್ ನೀಡಿದರು.
ಹಾಲು ಒಕ್ಕೂಟಗಳಲ್ಲಿ ಭ್ರಷ್ಟಾಚಾರ ಎಂಬ ಹೆಚ್.ಡಿ.ಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಅವರು ಮಾಜಿ ಸಿಎಂ ಆಗಿದ್ದವರು. ಸಹಕಾರಿ ಕ್ಷೇತ್ರದ ಬಗ್ಗೆ ಅವರಿಗಿಂತ ಅವರ ಅಣ್ಣ ಹೆಚ.ಡಿ.ರೇವಣ್ಣ ಅವರಿಗೆ ಗೊತ್ತಿದೆ. ಅವರು ಹೇಳುವ ರೀತಿ ಯಾವ ಭ್ರಷ್ಟಾಚಾರವೂ ನಡೆಯುತ್ತಿಲ್ಲ. ಹಾಲು ಒಕ್ಕೂಟಗಳು ಲಕ್ಷಾಂತರ ರೈತರಿಗೆ ಅನುಕೂಲ ಮಾಡಿಕೊಡುತ್ತಿವೆ. ಇಲ್ಲಿ ಭ್ರಷ್ಟಾಚಾರ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.