ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಈ ಪಕ್ಷವನ್ನು ಕರ್ನಾಟಕದಲ್ಲಿ ನಿಷೇಧ ಮಾಡುವ ಸಂಬಂಧ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಕಾನೂನು ಮತ್ತು ಸಂಸದೀಯ ಖಾತೆಯ ಸಚಿವ ಮಾಧುಸ್ವಾಮಿ ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಎಸ್‌ಡಿಪಿಐ ನಿಷೇಧ ಸಂಬಂಧವಾಗಿ ಕಾನೂನು ಮೂಲಕ ಏನು ಮಾಡಬಹುದೆಂದು ಚರ್ಚೆ ನಡೆದಿದೆ. ಪೊಲೀಸ್ ಇಲಾಖೆಯಿಂದ ಇನ್ನಷ್ಟು ಮಾಹಿತಿಯನ್ನು ಕೇಳಲಾಗಿದೆ. ಪೊಲೀಸ್ ಇಲಾಖೆ ವರದಿ ಕೊಟ್ಟ ಬಳಿಕ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಎಸ್‌ಡಿಪಿಐ ಬಗ್ಗೆ ಇಲ್ಲಿಯವರೆಗೆ ಗಟ್ಟಿ ಸಾಕ್ಷ್ಯಗಳು ಸಿಕ್ಕಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡುತ್ತೇವೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಸ್‌ಡಿಪಿಐ ರಾಜಕೀಯ ಪಕ್ಷವಾಗಿರುವ ಕಾರಣ ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿವರಿಸಿದರು.
ಕ್ಯಾಬಿನೆಟ್ ಸಭೆಯಲ್ಲಿ ಏನಾಯ್ತು?
ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಹಲವು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪ್ರಕರಣವನ್ನು ರಾಜಕೀಯಗೊಳಿಸಿ ವಿಷಯಾಂತರ ಮಾಡಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ. ಹೀಗಾಗಿ ನಾವು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು.
ತನ್ವೀರ್ ಸೇಟ್ ಮೇಲಿನ ಮಾರಣಾಂತಿಕ ಹಲ್ಲೆ, ಮಂಗಳೂರು ಗಲಭೆ ಪ್ರಕರಣ, ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆಗಳಲ್ಲಿ ಎಸ್‌ಡಿಪಿಐ ನೇರ ಪಾತ್ರವಿದೆ. ಇದನ್ನು ಆಧರಿಸಿ ಕೇಂದ್ರಕ್ಕೆ ನಿಷೇಧ ಕುರಿತು ಶಿಫಾರಸು ಮಾಡೋಣ. ಸಿಟಿ ರವಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿ ಹಲವರು ನಿಷೇಧಕ್ಕೆ ಒತ್ತಾಯ ಮಾಡಿದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಈ ವೇಳೆ ಬೊಮ್ಮಾಯಿ ಅವರು ಗೃಹ ಇಲಾಖೆ ಅಧಿಕಾರಿಗಳು ಈ ಹಿಂದಿನ ಘಟನೆಗಳನ್ನು ಆಧಾರಿಸಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ವಿರುದ್ಧ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ವರದಿಯನ್ನು ಸಿಎಂ ಬಿಎಸ್‌ವೈಗೆ ಸಲ್ಲಿಸಿದರು. ಬಳಿಕ ನಿಷೇಧದ ಸಾಧ್ಯಾಸಾಧ್ಯತೆಗಳು, ಕಾನೂನು ತೊಡಕುಗಳ ಕುರಿತಾಗಿ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಎಸ್‌ಡಿಪಿಐ ಪಕ್ಷವಾಗಿರುವುದರಿಂದ ನಿಷೇಧಕ್ಕೆ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು. ಅಂತಿಮವಾಗಿ ಸಿಎಂ ಕೇಂದ್ರ ಸರ್ಕಾರದ ಜೊತೆ ಚರ್ಚೆ ಮಾಡಿ ನಿಷೇಧ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.