ಬೆಂಗಳೂರು: ಸೋಷಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ) ಸಂಘಟನೆಗೆ ಬೆಂಗಳೂರು ಗಲಭೆ ಉರುಳಾಗುವಂತೆ ಕಾಣುತ್ತಿದೆ. ಕಾಡುಗೊಂಡನಹಳ್ಳಿ, ದೇವರಜೀವನಹಳ್ಳಿ ಗಲಭೆಯಲ್ಲಿ ಸೋಷಿಯಲ್ ಎಸ್‍ಡಿಪಿಐ ನೇರ ಪಾತ್ರ ಇದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೇ, ಎಸ್‍ಡಿಪಿಐ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ತನಿಖೆಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಂಪೂರ್ಣ ವರದಿಯನ್ನು ಇವತ್ತು ಗೃಹ ಸಚಿವರು ನೀಡಿದ್ದು, ಎಸ್‍ಡಿಪಿಐ ಪಾತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಎಸ್‍ಡಿಪಿಐನ ಭಿನ್ನಾಭಿಪ್ರಾಯ ಕೂಡ ಈ ಗಲಭೆಗೆ ಕಾರಣ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ದಾರೆ. ಇದನ್ನೂ ಓದಿ: ‘ಬೆಂಕಿ’ ಗಲಾಟೆಯ ಸಂಚುಕೋರನಿಗೆ ಭಯೋತ್ಪಾದಕ ಸಂಘಟನೆಯ ನಂಟು?
ಎಸ್‍ಡಿಪಿಐ ಬ್ಯಾನ್ ಮಾಡುವುದಕ್ಕೆ ಅಗತ್ಯವಾದ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಸಿಎಂ ಸೂಚನೆ ಕೊಟ್ಟ ತಕ್ಷಣ ಮುಂದುವರೆಯುತ್ತೇವೆ. ಸರ್ಕಾರ ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ಕಠಿಣ ಕ್ರಮ ತೆಗೆದುಕೊಂಡು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಸಚಿವ ಅಶೋಕ್ ತಿಳಿಸಿದ್ದಾರೆ.
ಇದು ಕಾಂಗ್ರೆಸ್ ಸರ್ಕಾರ ಅಲ್ಲ ರಾಜಾಹುಲಿ ಸರ್ಕಾರ. ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳು ಎರಡನೇ ಹಂತದ ನಾಯಕರನ್ನು ಟಾರ್ಗೆಟ್ ಮಾಡುತ್ತಿವೆ. ಭವಿಷ್ಯದಲ್ಲಿ ನಾಯಕರಾಗಲಿರುವವರೇ ಇವರ ಟಾರ್ಗೆಟ್ ಎಂದು ಅಶೋಕ್ ಆರೋಪಿಸಿದ್ದಾರೆ.
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2008ರಿಂದ ಇಲ್ಲಿಯವರೆಗೂ ಒಟ್ಟು 17 ಪ್ರಕರಣಗಳಲ್ಲಿ ಎಸ್‍ಡಿಪಿ, ಪಿಎಫ್‍ಐ ಭಾಗಿಯಾಗಿರೋದಕ್ಕೆ ಪುರಾವೆ ಇದೆ.
ಮಾಜಿ ಮಂತ್ರಿ ದಿನೇಶ್ ಗುಂಡೂರಾವ್, ಎಸ್‍ಡಿಪಿಐ ಬ್ಯಾನ್ ಮಾಡೋದಕ್ಕೆ ಕಾರಣಗಳು ಬೇಕು. ಕಾರಣಗಳನ್ನು ಕೊಟ್ಟು ಬ್ಯಾನ್ ಮಾಡಲಿ ಬೇಡ ಎನ್ನಲ್ಲ ಎಂದಿದ್ದಾರೆ. ಎಸ್‍ಡಿಪಿಐ ಮಾತ್ರ ನಾವು ತಪ್ಪೇ ಮಾಡಿಲ್ಲ. ಈ ಗಲಭೆ ಹಿಂದೆ ಬಿಜೆಪಿ ಕುಮ್ಮಕ್ಕಿದೆ ಎಂದು ಆರೋಪಿಸಿದೆ.
ಸರ್ಕಾರದ 10 ಚಾರ್ಜ್‍ಶೀಟ್‌ಗಳು
1. ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಕೊಲೆಯಲ್ಲಿ 9 ಅಪರಾಧಿಗಳು ಎಸ್‍ಡಿಪಿಐನವರು
2. ಆರ್‌ಎಸ್‌ಎಸ್ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ. ಕಸಾಯಿಖಾನೆ ಮುಚ್ಚಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಬಂಧಿತರು ಪಿಎಫ್‍ಐ ಕಾರ್ಯಕರ್ತರಾಗಿದ್ದರು.
3. ಎಸ್‍ಡಿಪಿಐನಿಂದಲೇ ಮೈಸೂರಿನ ರಾಜು ಕೊಲೆ .ಗಣೇಶ ಮಂದಿರ ಕಟ್ಟುವ ವಿಚಾರದಲ್ಲಿ ಹತ್ಯೆ
4. ಶಿವಾಜಿನಗರದ ಆರ್‌ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯಲ್ಲಿ ಭಾಗಿ. ಪಥ ಸಂಚಲನ ಮುಗಿಸಿ ಬರುವಾಗ ಕೊಲೆ ನಡೆದಿತ್ತು.
5. ಟಿಪ್ಪು ಜಯಂತಿ ವಿರೋಧಿಸಿದ್ದ ಮಡಿಕೇರಿಯ ಕುಟ್ಟಪ್ಪ ಕೊಲೆ
6. ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿಯೂ ಇದೇ ಸಂಘಟನೆ ಕೈವಾಡ
7. ಹುಣಸೂರಿನ ಇಬ್ಬರು ಯುವಕರ ಅಪಹರಣ ಮತ್ತು ಕೊಲೆ
8. ಮೈಸೂರಿನಲ್ಲಿ ನಡೆದ ಕೊಲೆ ಸಂಬಂಧ 9 ಕೇಸ್ ದಾಖಲು
9. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿ
10. ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆಗೆ ಜೀವ ಬೆದರಿಕೆ