ಮಡಿಕೇರಿ, ಸೋಮವಾರಪೇಟೆ: ತಮ್ಮ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವಾಗಲೆಲ್ಲಾ ಎಸ್ಮಾ ಜಾರಿ ಮಾಡುತ್ತೇವೆ. ಸಂಬಳ ಕಟ್ ಮಾಡುತ್ತೇವೆ ಅನ್ನೋ ಹಲವು ಬೆದರಿಕೆಗಳನ್ನು ಹಾಕುತ್ತಿರುತ್ತಾರೆ. ಇಂತಹ ಬೆದರಿಕೆಗಳಿಗೆ ನಾವು ಬಗ್ಗಲ್ಲ, ನಮ್ಮ ಮುಷ್ಕರ ನಡೆಯಲಿದೆ ಎಂದು ಕೆಎಸ್‍ಆರ್ ಟಿಸಿ ನೌಕರರ ಮುಖಂಡ ವರದರಾಜ್ ಸ್ಪಷ್ಟಪಡಿಸಿದ್ದಾರೆ.
ಆರನೇ ವೇತನ ಆಯೋಗವನ್ನು ಜಾರಿ ಮಾಡುವಂತೆ ನಮ್ಮ ಒತ್ತಾಯವಿದೆ. ಕೇವಲ ಎಂಟು ಪರ್ಸೆಂಟ್ ಸಂಬಳ ಹೆಚ್ಚಿಸುತ್ತೇವೆ ಅಂದರೆ ಅದಕ್ಕೆ ನಾವು ಸಿದ್ಧರಿಲ್ಲ. ನೋ ವರ್ಕ್ ನೋ ಪೇ ಎಂದು ಹೇಳುತ್ತಿದ್ದಾರೆ. ಆದರೆ ಕಳೆದ ಹಲವು ಬಾರಿ ಪ್ರತಿಭಟನೆ ಮಾಡಿದಾಗಲೂ ನಮ್ಮ ಸಂಬಳವನ್ನು ಕಟ್ ಮಾಡಿದ್ದಾರೆ. ಈಗಲೂ ಈ ಕುರಿತು ಮೂರು ದಿನಗಳ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ನಾವು ಇದ್ಯಾವುದಕ್ಕೂ ಬಗ್ಗುವದಿಲ್ಲ. ಖಾಸಗೀ ಬಸ್ಸುಗಳನ್ನು ಓಡಿಸುವುದಾದರೆ ಓಡಿಸಲಿ. ಎಷ್ಟು ದಿನಗಳು ಖಾಸಗಿ ಬಸ್ ಅಥವಾ ಕ್ಯಾಬ್ ಗಳನ್ನು ಓಡಿಸುತ್ತಾರೋ ನೋಡೋಣ ಎಂಬ ನಿರ್ಧಾರಕ್ಕೆ ಕೆಎಸ್‍ಆರ್ ಟಿಸಿ ನೌಕರರು ಬಂದಿದ್ದಾರೆ.
ಮಂಗಳವಾರ ಸಂಜೆಯಿಂದಲೇ ಹೊರ ಜಿಲ್ಲೆಗಳಿಗೆ ಹೋಗಿ ಹಾಲ್ಟಿಂಗ್ ಆಗುವ ಬಸ್ಸುಗಳ ಸಂಚಾರ ಸ್ಥಗಿತಗೊಳಲಿದೆ. ಬುಧವಾರ ಬೆಳಗ್ಗೆಯಿಂದ ಎಲ್ಲಾ ಬಸ್ಸುಗಳು ಬಂದ್ ಆಗಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.