ಹುಬ್ಬಳ್ಳಿ: ಮನುಷ್ಯನಿಗೆ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾದುದು. ಆರೋಗ್ಯದಿಂದ ಇದ್ದಾಗ ಮಾತ್ರ ಜೀವನ ಎಲ್ಲ ಸುಖ ಸಂತೋಷಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ಹುಬ್ಬಳ್ಳಿಯ ತಮ್ಮ ಜೀವನಾಡಿಯಾದ ನಿಸರ್ಗ ತೋಟದಲ್ಲಿ ಕೆಲಸ ಮಾಡುತ್ತಿರುವ ಕೃಷಿಕರು ಮತ್ತು ಕಾರ್ಮಿಕರಿಗೆ ಹಾಗೂ ಸುತ್ತುಮುತ್ತಲಿನ ಗ್ರಾಮದ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬಸವರಾಜ ಹೊರಟ್ಟಿ, ಕೋವಿಡ್‍ನ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ಜಾಗರೂಕತೆಯಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶ್ರಮಿಸಬೇಕು ಎಂದರು.
Advertisement
Advertisement
ಪ್ರತಿಯೊಬ್ಬರಿಗೂ ಯಾವುದೇ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಆರೋಗ್ಯದಿಂದ ಇರುವ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಯಾವುದೇ ಕೆಲಸ ಮಾಡಲು ಅನುಕೂಲ. ಆರೋಗ್ಯವೇ ಇಲ್ಲದಿದ್ದರೆ ಜೀವನ ವ್ಯರ್ಥ. ಈಗಿನ ದಿನಗಳಲ್ಲಿ ಯಾರೇ ಕೆಮ್ಮಿದರೂ, ಸೀನಿದರೂ ಅದನ್ನು ಕೊರೊನಾ ಎಂದೇ ತಿಳಿಯುವ ಸ್ಥಿತಿ ಬಂದೊದಗಿರುವುದು ದುರದೃಷ್ಟಕರ. ವೈದ್ಯರು ನಿಮ್ಮ ಮನೆ ಬಾಗಿಲಿಗೆ ಬಂದು ನೆರವಿನ ಹಸ್ತ ನೀಡಿದ್ದಾರೆ. ಇದನ್ನು ನೀವುಗಳೆಲ್ಲ ಸದುಪಯೋಗಪಡಿಸಿಕೊಂಡು ಅವರು ಹೇಳಿದ ಹಾಗೆ ಔಷಧ, ಮಾತ್ರೆಗಳನ್ನು ತೆಗೆದುಕೊಂಡು ಎಲ್ಲರೂ ನಿರೋಗಿಗಳಾಗಿ ನಿಮ್ಮ ಕಾರ್ಯದಲ್ಲಿ ತೊಡಗಿಕೊಳ್ಳಿರಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಖಾಸಗಿ ಅನುದಾನ ರಹಿತ ಶಿಕ್ಷಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಣೆ- ಸಿಎಂಗೆ ಬಸವರಾಜ ಹೊರಟ್ಟಿ ಅಭಿನಂದನೆ
Advertisement
ಕೋವಿಡ್‍ನ ಕಠಿಣ ಸಂದರ್ಭದಲ್ಲಿ ಬಸವರಾಜ ಹೊರಟ್ಟಿಯವರು ಸ್ವಯಂಸ್ಪೂರ್ತಿಯಿಂದ ಇಂತಹ ಜನಸೇವಾ ಕಾರ್ಯದಲ್ಲಿ ತೊಡಗಿದ್ದು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಿಬಿರದ ಪ್ರಯೋಜನ ಪಡೆದ ಬಡ ಕಾರ್ಮಿಕರು, ರೈತರು ಶ್ಲಾಘಿಸಿದರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಎಂ.ಅರವಿಂದ, ಸವಿತಾ ಎಸ್. ಮಲ್ಲಿಗವಾಡ, ಅಜಿತ್ ಎಚ್, ವಿಜಯಲಕ್ಷ್ಮಿ, ಸುಧೀರ ಕ್ಷತ್ರಿಯ, ರವಿ ಹೊರಗಿನಮಠ, ಹನಮಂತ ಕಲ್ಲವಡ್ಡರ ಮೊದಲಾದವರು ಭಾಗವಹಿಸಿದ್ದರು. ನಿಸರ್ಗ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದರು.