ಹಾವೇರಿ: ಮುಂದಿನ ಸಿಎಂ ರಾಷ್ಟ್ರವಾದಿ ಆಗುತ್ತಾರೆ ಎನ್ನುವ ಸಚಿವ ಕೆ.ಎಸ್.ಈಶ್ವರಪ್ಪರ ಹೇಳಿಕೆಗೆ ಎಲ್ಲರೂ ರಾಷ್ಟ್ರಭಕ್ತರೇ, ದೇಶದಲ್ಲಿರೋರು ಯಾರೂ ದೇಶದ್ರೋಹಿಗಳಲ್ಲ, ರಾಷ್ಟ್ರ ವಿರೋಧಿಗಳಲ್ಲ ಎಂದು ನೂತನ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿಯಲ್ಲಿ ಅಸಮಾಧಾನಗೊಂಡಿದ್ದ ಬಿಜೆಪಿ ಶಾಸಕ ನೆಹರು ಓಲೇಕಾರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದ್ದಕ್ಕೆ ನೆಹರು ಓಲೇಕಾರ ಅವರ ಮನೆಗೆ ಸೌಜನ್ಯದ ಭೇಟಿ ಮಾಡಿದ್ದೇನೆ. ಓಲೇಕಾರರು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದವರು, ಎಲ್ಲ ಅರ್ಹತೆ ಇದ್ದಂಥವರು. ಮೊನ್ನೆ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಕೈ ತಪ್ಪಿದೆ. ಅವರಿಗೆ ಅಸಮಾಧಾನ, ಅಸಂತೋಷ ಆಗಿದೆ. ಬರುವ ದಿನಗಳಲ್ಲಿ ಎಲ್ಲವನ್ನು ಸರಿಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲ ಶಾಸಕರು ಸೇರಿ ನೆಹರು ಓಲೇಕಾರ ಅವರಿಗೆ ಯಾವ ರೀತಿಯ ಸಹಾಯ ಮಾಡಬೇಕು ಎಂಬುದರ ಬಗ್ಗೆ ಕುಳಿತು ಚರ್ಚೆ ಮಾಡಿ ಸಿಎಂ ಭೇಟಿ ಮಾಡಲಿದ್ದೇವೆ. ಅದು ಅವರ ದೊಡ್ಡತನ. ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಹೈಕಮಾಂಡ್ ಭೇಟಿ ಮಾಡುತ್ತೇವೆ. ಈ ಬಗ್ಗೆ ಬಸವರಾಜ್ ಬೊಮ್ಮಾಯಿಯವರ ಜೊತೆಗೂ ಮಾತನಾಡುತ್ತೇವೆ ಎಂದಿದ್ದಾರೆ.
ಎನ್.ಮಹೇಶ್ ಅವರು ಬಿಜೆಪಿ ಸರ್ಕಾರ ಬರಲು ಸಹಾಯ ಮಾಡಿದ್ದರು. ನಿನ್ನೆ ಬಿಜೆಪಿ ಸೇರಿದ್ದಾರೆ. ಪಾರ್ಟಿಗೆ ಸೇರಿದವರನ್ನು ಖರೀದಿ ಮಾಡಿದ್ದಾರೆ ಅಂತಾ ಹೇಳುವುದು ಕಾಂಗ್ರೆಸ್ ಸಂಸ್ಕೃತಿ ಹೊರತು ಬಿಜೆಪಿ ಸಂಸ್ಕೃತಿಯಲ್ಲ. ಯಾರನ್ನು ಯಾರೂ ಖರೀದಿ ಮಾಡಲು ಆಗುವುದಿಲ್ಲ. ಯಾರಿಗೆ ಯಾರೂ ಬೆಲೆ ಕಟ್ಟೋಕೆ ಆಗುವುದಿಲ್ಲ. ಇವತ್ತು ಖಾತೆ ಹಂಚಿಕೆ ಆಗುತ್ತೆ ಅಂತ ಕೇಳಿದ್ದೇನೆ. ನಿರೀಕ್ಷೆಗೆ ಯಾವ ಖಾತೆ ಕೊಡುತ್ತಾರೆ ಅದನ್ನು ಮಾಡುತ್ತೇನೆ. ಏನೇ ಮಾಡಿದರೂ ಸರ್ಕಾರದ ಕೆಲಸ. ಸರ್ಕಾರದ ಇಲಾಖೆಗಳು, ಜನಪರವಾಗಿ ಕೆಲಸ ಮಾಡುವುದು. ಮುಖ್ಯಮಂತ್ರಿಗಳು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.
ಅಣ್ಣಾಮಲೈ ಅವರ ಹೋರಾಟ, ಹೋರಾಟ ಆಗಿರುತ್ತದೆ. ಈಗಾಗಲೇ ಕೇಂದ್ರ ಸರ್ಕಾರದಲ್ಲಿ ತೀರ್ಮಾನ ಆಗಿದೆ. ಅದು ಕರ್ನಾಟಕದ ಸ್ವತ್ತು. ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟು ಕೊಡುವುದಿಲ್ಲ. ಅಲ್ಲೇನು ಕೆಲಸ ಆಗಬೇಕು, ಅದನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಆತ್ಮತೃಪ್ತಿಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶ್ರೀನಿವಾಸ್ ಪ್ರಸಾದ್