– ಬೆಲ್ಜಿಯಂನಿಂದ ಭಾರತಕ್ಕೆ ಬಂತು ಪಾರ್ಸೆಲ್
ಬೆಂಗಳೂರು: ಎಲೆಕ್ಟ್ರಿಕ್ ಮಸಾಜರ್ ಒಳಗೆ ಡ್ರಗ್ಸ್ ಪಾರ್ಸೆಲ್ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇಡೀ ಭಾರತದಲ್ಲೇ ಡ್ರಗ್ ಮಾಫಿಯಾ ಪ್ರಕರಣ ಹೆಚ್ಚಾಗುತ್ತಿದೆ. ಎನ್‍ಸಿಬಿ ಅಧಿಕಾರಿಗಳು ದಿನಕ್ಕೊಬ್ಬರಂತೆ ಮಾಫಿಯಾದಲ್ಲಿ ತೊಡಗಿರುವವರನ್ನು ಅರೆಸ್ಟ್ ಮಾಡುತ್ತಿದ್ದಾರೆ. ಇದರಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇಂದು ಅದೇ ಅಧಿಕಾರಿಗಳು 1 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ಬೆಲ್ಜಿಯಂನಿಂದ ಬಂದ ವಿಮಾನದಲ್ಲಿ ಎಲೆಕ್ಟ್ರಿಕ್ ಮಸಾಜರ್ ಒಂದು ಪಾರ್ಸೆಲ್ ಬಂದಿತ್ತು. ಇದರ ಒಳಗೆ 1,980 ಗ್ರಾಂ ಪ್ರಮಾಣದ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಇರುವುದು ಪತ್ತೆಯಾಗಿದೆ. ಬೆಂಗಳೂರು ಅಂತರಾಷ್ಟ್ರೀಯ ಕೋರಿಯರ್ ಕೇಂದ್ರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಈ ಡ್ರಗ್ ಅನ್ನು ಪತ್ತೆ ಮಾಡಿದ್ದಾರೆ. ಸುಮಾರು 1 ಕೋಟಿಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆ ಇದರಲ್ಲಿ ಸಿಕ್ಕಿದೆ.
ಹೊರದೇಶದಿಂದ ಯಾವುದೇ ವಸ್ತು ಪಾರ್ಸೆಲ್ ಬಂದರೆ, ಅದು ಕಸ್ಟಮ್ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಹೀಗಿರುವಾಗ ಅಷ್ಟೊಂದು ಪ್ರಮಾಣದ ಮಾದಕ ವಸ್ತು ವಿದೇಶದಿಂದ ಹೇಗೆ ಬರುತ್ತಿದೆ. ಇದರಲ್ಲಿ ಕಸ್ಟಮ್ ಅಧಿಕಾರಿಗಳು ಭಾಗಯಾಗಿದ್ದರಾ ಎಂಬ ಅನುಮಾನಗಳು ಮೂಡಿತ್ತು. ಡ್ರಗ್ ಮಾಫಿಯಾ ಒಂದು ದೊಡ್ಡ ನೆಟ್‍ವರ್ಕ್ ಆಗಿದ್ದು, ಇದರಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ಮಂದಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ನಟಿಯರಾದ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.