– ಲಕ್ಷಾಂತರ ಮೌಲ್ಯದ ಸಾಮಗ್ರಿ ವಶ
ಶಿವಮೊಗ್ಗ: ನಕಲಿ ದಾಖಲೆ ನೀಡಿ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಖರೀದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೋಸ ಮಾಡಿ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋದ ಪ್ರಕರಣದ ಹಿನ್ನೆಲೆಯಲ್ಲಿ ಜಯನಗರ ಪೊಲೀಸರು ನಾಗೇಶ್ (50) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 4.15 ಲಕ್ಷ ರೂ. ಮೌಲ್ಯದ 2 ಜೆರಾಕ್ಸ್ ಮಷಿನ್, 5 ಪ್ರಿಂಟರ್, 2 ಯುಪಿಎಸ್ ಹಾಗೂ 06 ಬ್ಯಾಟರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ನಾಗೇಶ್ ಶಿವಮೊಗ್ಗ ನಗರದ ಯುಟಿಪಿ ಕಾಲೋನಿ ನಿವಾಸಿಯಾಗಿದ್ದು, ಶಿಕಾರಿಪುರದಲ್ಲಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿ ಎಸ್‍ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ.
ನಾಗೇಶ್ ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜೀಸ್ ಮತ್ತು ವೆಂಕಟೇಶ್ ನಗರದ ಹೈಟೆಕ್ ಸೆಲ್ಯೂಷನ್ ಎಂಬ ಎರಡು ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ಯಂತ್ರೋಪಕರಣಗಳನ್ನು ಖರೀದಿಸಿದ್ದ. ನಂತರ ಅನುಮಾನ ಬಂದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಈತನ ವಿರುದ್ಧ ಜಯನಗರ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.