ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ರಮೇಶ್ ಜಾರಕಿಹೊಳಿ ಎರಡು ಷರತ್ತುಗಳನ್ನು ವಿಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವಾಗ ರಮೇಶ್ ಜಾರಕಿಹೊಳಿ ಎರಡು ಷರತ್ತುಗಳನ್ನು ವಿಧಿಸಿದ್ದಾರೆ. ಆದರೆ ಇದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯಕ್ಕೆ ಯಾವುದೇ ಒಪ್ಪಿಗೆ ಸೂಚಿಸಿಲ್ಲ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ನಾನು ರಾಜೀನಾಮೆ ನೀಡಿದ ಬಳಿಕ ನಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡಬೇಕು. ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸ್ಥಾನ ಕೊಡಬೇಕು. ರಾಜೀನಾಮೆ ಕೊಟ್ಟ ಬಳಿಕ ಕೇವಲ ಒಂದು ತಿಂಗಳ ಒಳಗೆ ನಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಷರತ್ತು ವಿಧಿಸಿದ್ದಾರೆ. ಹೀಗಾಗಿ ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ವೇಳೆ ಬಾಲಚಂದ್ರ ಜಾರಕಿಹೊಳಿಗೆ ಅದೃಷ್ಟ ಖುಲಾಯಿಸುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದೆ.
ಸಚಿವ ಸ್ಥಾನದ ಜೊತೆಗೆ ಮತ್ತೊಂದು ಬೇಡಿಕೆಯನ್ನೂ ಇಟ್ಟಿರುವ ರಮೇಶ್ ಜಾರಕಿಹೊಳಿ, ಜಲಸಂಪನ್ಮೂಲ ಖಾತೆಯನ್ನು ನಮ್ಮ ಕುಟುಂಬಕ್ಕೇ ನೀಡಬೇಕು ಎಂದು ಎರಡನೇ ಷರತ್ತು ವಿಧಿಸಿದ್ದಾರೆ. ನಮ್ಮ ಕುಟುಂಬದವರಿಗೆ ಖಾತೆ ನೀಡುವವರೆಗೆ ಜಲಸಂಪನ್ಮೂಲ ಖಾತೆ ಸಿಎಂ ಬಳಿಯೇ ಇರಬೇಕು ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಮೇಶ್ ಜಾರಕಿಹೊಳಿಯವರ ಯಾವುದೇ ಷರತ್ತಿಗೆ ಸಿಎಂ ಯಡಿಯೂರಪ್ಪ ಯಾವುದೇ ಒಪ್ಪಿಗೆ ಸೂಚಿಸಿಲ್ಲ. ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ ಮೂಲಕ ರಾಜೀನಾಮೆ ಕೊಡಿಸುವ ಕಸರತ್ತನ್ನು ಸಿಎಂ ಯಡಿಯೂರಪ್ಪ ಮಾಡಿದ್ದರು. ಹೀಗಾಗಿ ಜಾರಕಿಹೊಳಿ ಷರತ್ತಿಗೆ ಸಿಎಂ ಡೋಂಟ್ ಕೇರ್ ಎಂದಿದ್ದಾರೆ. ಹೈಕಮಾಂಡ್ ಏನು ಮಾಡುತ್ತೋ ನೋಡೋಣ ಎಂದು ಹೇಳಿ ಕಳುಹಿಸಿದ್ದಾರೆ.