ಚಾಮರಾಜನಗರ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸಂಗ್ರಹಣೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಎರಡು ಲಕ್ಷ ರೂ.ಗೂ ಅಧಿಕ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿರುವ ಘಟನೆ ರಾಜ್ಯದ ಗಡಿಯಂಚಿನ ಜಲ್ಲಿಪಾಳ್ಯ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಹನೂರು ತಾಲೂಕಿನ ಜಲ್ಲಿಪಾಳ್ಯದ ವೀರಪ್ಪನ್(74) ಮತ್ತು ಶೇಷುರಾಜ್(52) ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಮಾರಾಟ ಮಾಡುವ ಸಲುವಾಗಿ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಣೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೊಳ್ಳೇಗಾಲ ಉಪವಿಭಾಗದ ಡಿವೈಎಸ್ಪಿ ನಾಗರಾಜು, ರಾಮಾಪುರ ಪಿಎಸ್‍ಐ ಮನೋಜ್ ಕುಮಾರ್ ಹಾಗೂ ಸಿಬ್ಬಂದಿ ಮನೆಗಳ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಆರೋಪಿ ವೀರಪ್ಪನ್‍ನ ಮನೆಯಲ್ಲಿ 1.29 ಕೆ.ಜಿ. ಒಣ ಗಾಂಜಾ ಮತ್ತು ಮತ್ತೋರ್ವ ಆರೋಪಿ ಶೇಷುರಾಜ್ ಮನೆಯಲ್ಲಿ 1.40 ಕೆ.ಜಿ. ಗಾಂಜಾ ಸಿಕ್ಕಿದೆ. ಗಾಂಜಾದ ಒಟ್ಟು ಮೌಲ್ಯ 2.16ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ರಾಮಾಪುರ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.