ಚಿಕ್ಕಮಗಳೂರು/ಚಾಮಾರಾಜನಗರ: ಚಿಕ್ಕಮಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಓರ್ವ ಹಾಗೂ ಚಾಮರಾಜನಗರದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮನೆಯಲ್ಲೇ ಗಾಂಜಾ ಶೇಖರಿಸಿಟ್ಟು ನಗರದ ಕೂಲಿ ಕಾರ್ಮಿಕರು ಹಾಗೂ ಯುವಕರಿಗೆ ಮಾರುತ್ತಿದ್ದ ವ್ಯಕ್ತಿಯನ್ನು ನಗರದ ಬಸವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಚಿಕ್ಕಮಗಳೂರು ನಗರದ ಗೌರಿಕಾಲುವೆಯ ಹನೀಫ್ ಎಂದು ಗುರುತಿಸಲಾಗಿದೆ. ಬಂಧಿತನಿಂದ 2 ಕೆ.ಜಿ. 250 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ. ವ್ಯಕ್ತಿ ಮನೆಯ ಪಕ್ಕದಲ್ಲೇ ಯುವಕರು ಹಾಗೂ ಕೂಲಿ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.
Advertisement
Advertisement
ಬಂಧಿತ ವ್ಯಕ್ತಿ ಹನೀಫ್ ಗಾಂಜಾ ಮಾರಲು ಮನೆಯಿಂದ ಪಕ್ಕದ ಏರಿಯಾಕ್ಕೆ ತೆಗೆದುಕೊಂಡು ಹೋಗುವಾಗ ಬಸವನಹಳ್ಳಿ ಪೊಲೀಸರಿಗೆ ಮಾಲ್ ಸಮೇತ ಸಿಕ್ಕಿ ಬಿದ್ದಿದ್ದಾನೆ. ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾ ಬೆಲೆ 1 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕಳೆದ ಎರಡು ದಿನಗಳ ಹಿಂದಷ್ಟೆ ತಾಲೂಕಿನ ಅಲ್ಲಂಪುರ ನಿವಾಸಿ ನಾಗರಾಜ್ ಎಂಬಾತ ಕೂಡ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದನು. ಚಿಕ್ಕ ಪ್ಯಾಕ್ ಮಾಡಿ ಒಂದು ಪ್ಯಾಕ್ ಗೆ 500 ರೂಪಾಯಿಯಂತೆ ಚಿಕ್ಕಮಗಳೂರು ನಗರದ ಪಟಾಕಿ ಆವರಣದಲ್ಲಿ ಗಾಂಜಾ ಮಾರಾಟ ಮಾಡುವಾಗ ನಗರ ಪೊಲೀಸರ ಅತಿಥಿಯಾಗಿದ್ದ. ಎರಡು ಪ್ರಕರಣಗಳು ಸೇರಿ ಕಳೆದ ಮೂರು ದಿನಗಳಲ್ಲಿ ನಗರದಲ್ಲಿ ಮೂರುವರೆ ಕೆ.ಜಿ. ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
ಇತ್ತ ಚಾಮರಾಜಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದು, ಬಂಧಿತರಿಂದ 2 ಕೆ.ಜಿ ಒಣಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರದ ಗಾಳೀಪುರ ಬಡಾವಣೆಯ ಸಯ್ಯದ್ ರುಮಾನ್, ಮಹಮದ್ ಅಲ್ತಾಫ್, ವೆಂಕಟೇಗೌಡ ಹಾಗೂ ಗೋವಿಂದರಾಜು ಎಂಬುವರು ಗಾಂಜಾ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದಾಗ ಚಾಮರಾಜನಗರ ತಾಲೂಕು ದೊಡ್ಡರಾಯಪೇಟೆ ಬಳಿ ಸೈಬರ್, ಎಕನಾಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ವಿಭಾಗದ ಪೊಲೀಸರು ಬಲೆ ಬೀಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಗಾಂಜಾ ಸಾಗಿಸುತ್ತಿದ್ದ ಕಾರು ಹಾಗೂ ಸುಮಾರು 1.20 ಲಕ್ಷ ರೂ. ಮೌಲ್ಯದ ಒಣಗಾಂಜಾ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.