-ಚಾಕು, ಬ್ಲೇಡ್ ಬಳಸಿ ಮಗುವಿನ ಕೊಲೆ
-ಮದ್ವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದ ಮಗಳು
ಭೋಪಾಲ್: ಸೆಪ್ಟೆಂಬರ್ 30ರಂದು ಭೋಪಾಲ್ ನ ಅಯೋಧ್ಯ ನಗರದಲ್ಲಿ ಪತ್ತೆಯಾಗಿದ್ದ ಅಪರಿಚಿತ ಮಗುವಿನ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಅಜ್ಜ- ಅಜ್ಜಿಯನ್ನು ಬಂಧಿಸಿದ್ದಾರೆ.
ಅಯೋಧ್ಯಾ ನಗರದ ಜಿ ಸೆಕ್ಟರ್ ನ ಸೈಂಟ್ ಥೋಮಸ್ ಶಾಲೆಯ ಮುಂಭಾಗದಲ್ಲಿರುವ ದೇವಸ್ಥಾನವೊಂದರ ಪಕ್ಕದಲ್ಲಿ ಹಸುಗೂಸು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಶಾಲಿನಿಂದ ಸುತ್ತಿದ್ದ ಮಗುವಿನ ಮೃತದೇಹವನ್ನು ತೆರೆದು ನೋಡಿದಾಗ ಅದರ ಎದೆ ಹಾಗೂ ಬೆನ್ನಿನ ಭಾಗದಲ್ಲಿ ಸುಮಾರು 100 ಕ್ಕೂ ಹೆಚ್ಚು ಬಾರಿ ಇರಿತವಾಗಿರುವ ಗುರುತುಗಳು ಇರುವುದನ್ನು ಪೊಲೀಸರು ಗಮನಿಸಿದ್ದರು. ಹೀಗಾಗಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ಮಗುವನ್ನು ರಾತ್ರಿ ದೇವಾಲಯದಲ್ಲಿ ಪಕ್ಕದಲ್ಲಿ ಬಿಟ್ಟು ಹೋಗಿರಬೇಕು. ಹೀಗಾಗಿ ಪ್ರಾಣಿಗಳು ಕಚ್ಚಿ ಗಾಯಗೊಳಿಸಿರಬಹುದು ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಣ್ಣದಾದ ಹರಿತವಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿ ಬಂದಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು ಅಜ್ಜ-ಅಜ್ಜಿಯನ್ನ ಬಂಧಿಸಿದ್ದಾರೆ. ಪೊಲೀಸರು ಮೊದಲಿಗೆ ಆಸ್ಪತ್ರೆಗಳಲ್ಲಿ ಹೆಣ್ಣು ಮಗು ಹುಟ್ಟಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ತದನಂತರ ಮನೆಯಲ್ಲಿಯೇ ಹೆರಿಗೆ ಮಾಡಿಸುವ ಮಹಿಳೆಯನ್ನ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಮುಂದೆ ದಂಪತಿ ಮಗುವನ್ನು ತಾವೇ ಕೊಲೆ ಮಾಡಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮದುವೆಗೂ ಮೊದಲೇ ಮಗಳು ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಜನವರಿಯಲ್ಲಿ ಆಕೆ ಗರ್ಭಿಣಿ ಆಗಿರೋದು ನಮಗೆ ತಿಳಿದಿತ್ತು. ಹೊರಗೆ ವಿಷಯ ತಿಳಿಯಬಾರದು ಅಂತ ಮನೆಯಲ್ಲಿಯೇ ಹೆರಿಗೆ ಮಾಡಿಸಲಾಗಿತ್ತು. ನಂತರ ಮಗುವನ್ನ ಕೊಂದು ಶವವನ್ನ ಬಿಸಾಡಲಾಗಿತ್ತು ಎಂದು ಆರೋಪಿಗಳು ಹೇಳಿದ್ದಾರೆ.