ಕಲಬುರಗಿ: ಕಳೆದ ಎರಡು ದಶಕಗಳ ಹಿಂದೆ ನಾನಾ ಕಾರಣಗಳಿಂದ ಬಂದ್ ಆಗಿದ್ದ ಶಹಬಾದ್ ಪಟ್ಟಣದಲ್ಲಿನ ಇಎಸ್‍ಐ ಆಸ್ಪತ್ರೆಗೆ ಇದೀಗ ಹೈಟೆಕ್ ಟಚ್ ನೀಡಲಾಗುತ್ತಿದ್ದು, ಇಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಆಸ್ಪತ್ರೆಗೆ ಭೇಟಿ ಕಾಮಗಾರಿ ಪರಿಶೀಲನೆ ನಡೆಸಿದರು.
ನೀರು, ಆಂತರಿಕ ವಿದ್ಯುತ್ತೀಕರಣ ಸೇರಿದಂತೆ ಬಹುತೇಕ ಸಿವಿಲ್ ಕಾಮಗಾರಿ ಪೂರ್ಣಗೊಂಡಿವೆ ಎಂದು ಸ್ಥಳದಲ್ಲಿದ್ದ ಸೇಡಂ ಉಪವಿಭಾಗದ ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಕೃಷ್ಣಾ ಅಗ್ನಿಹೋತ್ರಿ ಅವರು ಮಾಹಿತಿ ನೀಡಿದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದ್ದರಿಂದ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.
ನವೀಕರಣಗೊಂಡ ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳ ಇಂಡೆಂಟ್ ಸಲ್ಲಿಸಬೇಕು. ಅದರ ಜೊತೆಗೆ ಅಸ್ಪತ್ರೆಗೆ ಅವಶ್ಯಕವಿರುವ ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ವಿವರ ಸಹ ನೀಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಮರದೀಪ ಪವಾರ್ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಉಳಿದ ಕೆಲಸ-ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ, ಅಸ್ಪತ್ರೆ ಪುನರಾರಂಭಕ್ಕೆ ಅಣಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸುರೇಶ್ ವರ್ಮಾ, ನಗರಸಭೆಯ ಆಯುಕ್ತ ಕೆ.ಗುರುಲಿಂಗಪ್ಪ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಅಣ್ಣೆಪ್ಪ ಕುದ್ರಿ, ಸಹಾಯಕ ಅಭಿಯಂತ ಜಗನ್ನಾಥ್ ಮಾಳಗೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.