– ನಿನ್ನ ಆರೋಗ್ಯ ಸರಿಯಿಲ್ಲವೆಂದ ಗಂಡ
ಚೆನ್ನೈ: ಎರಡನೇ ಮದುವೆಯಾಗಲು ತಯಾರಿ ನಡೆಸುತ್ತಿದ್ದ ಪತಿಯನ್ನು ಪತ್ನಿಯೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್ ಪಟ್ಟಿಯಲ್ಲಿ ನಡೆದಿದೆ.
ಕೊಲೆಯಾದ ಪತಿಯನ್ನು ಪ್ರಭು ಎಂದು ಗುರುತಿಸಲಾಗಿದೆ. ಈತ ತನ್ನ ಮೊದಲ ಪತ್ನಿ ಉಮಾಮಹೇಶ್ವರಿ ಜೀವಂತ ಇದ್ದಾಗಲೇ ಎರಡನೇ ವಿವಾಹವಾಗಲು ಸಜ್ಜಾಗಿದ್ದನು. ಪತಿಯ ನಡೆಯಿಂದ ಬೇಸತ್ತ ಪತ್ನಿ ಆತನನ್ನೇ ಕೊಲೆ ಮಾಡಿದ್ದಾಳೆ.
ಪ್ರಭು ಹಾಗೂ ಉಮಾಮಹೇಶ್ವರಿ ಕೋವಿಲ್ ಪಟ್ಟಿಯ ಲಾಯಲ್ ಮಿಲ್ ಕಾಲನಿಯಲ್ಲಿ ವಾಸವಿದ್ದರು. ಇವರಿಗೆ 7 ಹಾಗೂ 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ವಿಪರೀತ ಮದ್ಯವ್ಯಸನಿಯಾಗಿದ್ದ ಪ್ರಭು, ಕಂಠಪೂರ್ತಿ ಕುಡಿದುಕೊಂಡು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದನು.
ಕೆಲವು ದಿನಗಳಿಂದ ಉಮಾಮಹೇಶ್ವರಿ ಆರೋಗ್ಯ ಹದಗೆಟ್ಟಿತ್ತು. ಶುಕ್ರವಾರ ಕಂಠಪೂರ್ತಿ ಕುಡಿದುಕೊಂಡು ಬಂದ ಪ್ರಭು, ನಿನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ನಾನು ಎರಡನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ಪತಿ ಮಾತು ಕೇಳಿದ ಪತ್ನಿ ಮೊದಲೇ ಆತನ ವರ್ತನೆಯಿಂದ ಬೇಸತ್ತಿದ್ದು, ಕುಡುಗೋಲಿನಿಂದ ಗಂಡನ ಕುತ್ತಿಗೆ ಕಡಿದಿದ್ದಾಳೆ. ಗಂಭೀರ ಗಾಯಗೊಂಡ ಪ್ರಭು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇತ್ತ ಘಟನೆಯ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.