-ಬಿಜೆಪಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೊಲೆ
ಬೆಂಗಳೂರು: ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಬೆನ್ನುಮೂಳೆ ಮುರಿಯುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
Advertisement
ಸಂಸತ್ ನಲ್ಲಿ ವಿರೋಧಪಕ್ಷಗಳ ಅಭಿವ್ಯಕ್ಕಿ ಸ್ವಾತಂತ್ರ್ಯದ ಕೊರಳನ್ನು ಹಿಚುಕಿ, ರೈತರ ಪಾಲಿಗೆ ಮರಣಶಾಸನವಾಗಿರುವ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆಗೆ ಬಲಾತ್ಕಾರದಿಂದ ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. ಕೊರೊನಾ ರೋಗವನ್ನು ನಿಯಂತ್ರಿಸಲಾಗದೆ ಮಂಡಿ ಊರಿ ದೇಶದ ಜನರನ್ನು ಸಾವು-ನೋವಿನ ದವಡೆಗೆ ನೂಕುತ್ತಿರುವ ಅಸಮರ್ಥ ಸರ್ಕಾರ, ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಕೊರೊನೋತ್ತರ ಭಾರತದ ಏಕೈಕ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ.
Advertisement
Advertisement
ಕೃಷಿಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ಮಸೂದೆಗಳ ಬಗ್ಗೆ ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಮತ್ತು ಮಸೂದೆಗಳನ್ನು ಆಯ್ಕೆ ಸಮಿತಿಯ ಪರಿಶೀಲನೆಗೊಳಪಡಿಸಬೇಕು ಎಂಬ ವಿರೋಧಪಕ್ಷಗಳ ಬೇಡಿಕೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿರುವುದು ಯಾಕೆ? ದುರ್ಬಲರು, ಅಸಹಾಯಕರು ಮತ್ತು ಅಸಂಘಟಿತರಾಗಿರುವ ಶೇಕಡಾ 80ರಷ್ಟಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿಮಾರುಕಟ್ಟೆಯನ್ನು ಸರ್ಕಾರದ ನೆರವಿಲ್ಲದೆ ಸ್ವಯಂ ನಿಯಂತ್ರಿಸಲಾರರು. ಆ ಕೆಲಸ ಮಾಡುತ್ತಿದ್ದ ಎಪಿಎಂಸಿಯನ್ನು ನಾಶಮಾಡುವುದೆಂದರೆ ಪೂರ್ಣ ಕೃಷಿಕ್ಷೇತ್ರವನ್ನು ಮಣ್ಣುಪಾಲು ಮಾಡುವುದು.
Advertisement
ಎಪಿಎಂಸಿಗಳ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಖಾಸಗಿ ಕಂಪನಿಗಳಿಗೆ ಹೆಬ್ಬಾಗಿಲು ತೆರೆಯುವುದೇ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆಯ ದುರುದ್ದೇಶ. ಇದು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರ ಬೆನ್ನು ಮುರಿಯುವ ಮನೆಹಾಳು ಕೆಲಸ.
ಕೃಷಿ ಮಾರುಕಟ್ಟೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ಬಿಟ್ಟುಕೊಟ್ಟು ಎಪಿಎಂಸಿಗಳನ್ನು ಖಾಸಗಿ ಧಣಿಗಳಿಗೆ ಪಾದಕ್ಕೊಪ್ಪಿಸಿ ರೈತರನ್ನು ಅವರನ್ನು ಜೀತದಾಳುಗಳಾಗಿ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಹುನ್ನಾರಗಳನ್ನು ರೈತಬಂಧುಗಳು ಅರಿತುಕೊಳ್ಳಬೇಕು. ರೈತರ ಬೆಳೆಗೆ ಉತ್ಪಾದನಾ ವೆಚ್ಚಕ್ಕೆ ತಕ್ಕ ಬೆಲೆ ಸಿಗದಿರುವುದೇ ಕೃಷಿಕ್ಷೇತ್ರದ ಮೂಲ ಸಮಸ್ಯೆ. ಇದಕ್ಕಾಗಿಯೇ ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಹೊಸ ತಿದ್ದುಪಡಿ ಕಾನೂನಿನಲ್ಲಿ ಬೆಂಬಲಬೆಲೆಯ ರಕ್ಷಣೆಯನ್ನು ಕಿತ್ತೊಗೆದು ರೈತರನ್ನು ಅನಾಥರನ್ನಾಗಿ ಮಾಡಲಾಗಿದೆ.
ಕೇಂದ್ರ ಸರ್ಕಾರ ಸಂಸತ್ ನಿಂದ ಅನುಮೋದನೆ ಪಡೆದುಕೊಂಡಿರುವ ಹೊಸಕಾನೂನಿನಲ್ಲಿ ರೈತರ ಬೆಂಬಲ ಎಪಿಎಂಸಿಯ ಹೊಸ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಎಂಪಿಎಂಸಿಯಿಂದ ಹೊರಗಿರುವ ವರ್ತಕರ ಮೇಲೆ ಯಾವ ನಿಯಂತ್ರಣವೂ ಇರುವುದಿಲ್ಲ. ಅವರ ವ್ಯವಹಾರದ ಮೇಲೆ ನಿಗಾ ಇಡುವಂತಿಲ್ಲ. ಶುಲ್ಕ, ಸೆಸ್, ಲೆವಿ ಸಂಗ್ರಹಿಸುವಂತಿಲ್ಲ. ಇದು ಸರ್ಕಾರದ ಸಂಪೂರ್ಣ ಶರಣಾಗತಿ.
ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಆಹಾರ ಭದ್ರತೆ ಮಸೂದೆಯ ಮೂರು ಸ್ತಂಭಗಳಾದ ಬೆಂಬಲ ಬೆಲೆ, ರೈತರಿಂದ ಬೆಳೆ ಖರೀದಿ ಮತ್ತು ಪಡಿತರ ವ್ಯವಸ್ಥೆಯನ್ನು ನಾಶಗೊಳಿಸುವ ಮೂಲಕ ಕೃಷಿಕ್ಷೇತ್ರವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ. ಪ್ರಸ್ತುತ ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ )ಕಾಯ್ದೆ ರೈತರ ಹಿತಾಸಕ್ತಿ ರಕ್ಷಣೆಗೆ ಬದ್ಧವಾಗಿದೆ.
ಸೆಕ್ಷನ್ 8 ರ ಪ್ರಕಾರ ”ಎಪಿಎಂಸಿ ಮಾರುಕಟ್ಟೆ ಯಾರ್ಡ್ ಒಳಗೆ ಇಲ್ಲವೆ ಹೊರಗೆ ಯಾರೂ ಕೂಡಾ ಅಧಿಕೃತ ಲೈಸೆನ್ಸ್ ಇಲ್ಲದೆ ವ್ಯಾಪಾರ ನಡೆಸುವಂತಿಲ್ಲ”. ಇದಕ್ಕೆ ತಿದ್ದುಪಡಿ ಮಾಡಲಾಗಿದೆ. ಸೆಕ್ಷನ್ 66 ಮತ್ತು 67ರ ಪ್ರಕಾರ ಯಾರ್ಡ್ ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮ ವ್ಯಾಪಾರ, ಕಾಳಸಂತೆ ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಅವಕಾಶವಿದೆ. ಈ ಸೆಕ್ಷನ್ ಗೂ ತಿದ್ದುಪಡಿ ಮಾಡಲಾಗಿದೆ.
ರೈತರಿಗೆ ನ್ಯಾಯಬದ್ಧ ಬೆಲೆ ಸಿಗುವಂತೆ ಮಾಡಲು ಖಾಸಗಿ ಸಂಸ್ಥೆಗಳ ಲೆಕ್ಕಪತ್ರ ಪರಿಶೀಲಿಸಬಹುದು. ಸೆಕ್ಷನ್ 114, 116 ಮತ್ತು 117ರಡಿಯಲ್ಲಿ ತಪ್ಪಿತಸ್ಥರಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶ ಇದೆ. ಈ ಆರೂ ಸೆಕ್ಷನ್ ಗಳನ್ನು ತಿದ್ದುಪಡಿ ಮೂಲಕ ಬದಲಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ.
ಪ್ರಸ್ತುತ ಶೇ.6 ರೈತರು ಮಾತ್ರ ಎಪಿಎಂಸಿಗಳಲ್ಲಿ ಬೆಳೆ ಮಾರಾಟ ಮಾಡುತ್ತಿದ್ದು, ಶೇ.94 ರೈತರಿಗೆ ಮಾರುಕಟ್ಟೆ ಸೌಲಭ್ಯಗಳಿಲ್ಲ. ರೈತರಿಗೆ ನೆರವಾಗುವ ಉದ್ದೇಶ ಸರ್ಕಾರಕ್ಕಿದ್ದರೆ ಮಾರುಕಟ್ಟೆಗಳಿಲ್ಲದ ಕಡೆಗಳಲ್ಲಿ ಎಪಿಎಂಸಿಯಿಂದ ಪರವಾನಿಗೆ ಪಡೆದು ಮಾರುಕಟ್ಟೆಗಳನ್ನು ಸ್ಥಾಪಿಸಲು ಸರ್ಕಾರ ಉತ್ತೇಜನ ನೀಡಬಹುದಾಗಿದೆ. ನಮ್ಮಲ್ಲಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಆಯ್ಕೆಯಾದ ರೈತ ಪ್ರತಿನಿಧಿಗಳನ್ನೊಳಗೊಂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿವೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯ ಅನುಷ್ಠಾಟನದ ಮೂಲಕ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸಿರುವ ಪ್ರಕ್ರಿಯೆಯಲ್ಲಿ ಎಪಿಎಂಸಿಗಳ ಪಾತ್ರ ನಿರ್ಣಾಯಕ.
ಇಲ್ಲಿ ರೈತರು ಮಧ್ಯವರ್ತಿಗಳ ಕಾಟ ಇಲ್ಲದೆ ನೇರವಾಗಿ ವರ್ತಕರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡಲು ಅವಕಾಶ ಇದೆ. ಇದರ ಜೊತೆಗೆ ತಮ್ಮ ಉತ್ಪನ್ನಗಳನ್ನು ಅಡಮಾನ ಇಟ್ಟು ಸಾಲ ಪಡೆಯಬಹುದು. ದಾಸ್ತಾನು ಮಳಿಗೆ, ವಿಶ್ರಾಂತಿ ಗೃಹಗಳ ಸೌಲಭ್ಯಗಳೂ ಇವೆ. ಬಹಳ ಮುಖ್ಯವಾಗಿ ರೈತರು ಸಂಘಟಿತರಾಗಲು ಇದು ವೇದಿಕೆ ಒದಗಿಸಿದೆ. ಒಮ್ಮೆ ಈ ಬಹುರಾಷ್ಟ್ರೀಯ ಕಂಪನಿಗಳು ಕಾಯ್ದೆ ತಿದ್ದುಪಡಿ ಮೂಲಕ ಮೀಸೆ ತುರುಕಿಸಿ ಒಳಪ್ರವೇಶಿಸಿದರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಪ್ರಸ್ತುತ ಗೊಳಿಸಿ, ನಾಶ ಮಾಡಲು ಬಹಳ ದಿನಗಳು ಬೇಕಾಗಲಾರದು.
ಈ ಮೂಲಕ ಮಾರುಕಟ್ಟೆಯನ್ನು ತಮ್ಮ ನಿಯಂತ್ರಣಕ್ಕೆ ಪಡೆದು ನಿಧಾನವಾಗಿ ಎಪಿಎಂಸಿಗಳನ್ನು ಅಪ್ರಸ್ತುತಗೊಳಿಸುವುದು ಇದರ ಹಿಂದಿನ ನಿಜವಾದ ದುರುದ್ದೇಶ ಎನ್ನವುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯನ್ನು ತರಲು ಹೊರಟಿರುವ ವಿಧಾನವೇ ಪ್ರಜಾಪ್ರಭುತ್ವ ವಿರೋಧಿಯಾದುದು. ರೈತರಿಗೆ ನೆರವಾಗುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ತಂದಿದ್ದರೆ ಇದನ್ನು ಮೊದಲು ವಿಸ್ತೃತ ಚರ್ಚೆಗೊಳಪಡಿಸಬೇಕಿತ್ತು. ರೈತ ಪ್ರತಿನಿಧಿಗಳು, ಎಪಿಎಂಸಿ ಪದಾಧಿಕಾರಿಗಳು ಮತ್ತು ವರ್ತಕರ ಅಭಿಪ್ರಾಯ ಪಡೆದು ಈ ತಿದ್ದುಪಡಿಯನ್ನು ರೂಪಿಸಬೇಕಾಗಿತ್ತು.
ಕೇಂದ್ರ ಸರ್ಕಾರದ ತಿದ್ದುಪಡಿ ಕಾಯ್ದೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ )ಕಾಯ್ದೆ ತಿದ್ದುಪಡಿ ಮಸೂದೆಯ ಮೂಲಕ ಅನುಮೋದಿಸಲು ರಾಜ್ಯ ಸರ್ಕಾರ ಹೊರಡಿಸಿದೆ. ಇದರೊಳಗೆ ಅಡಕವಾಗಿರುವ ರೈತ ವಿರೋಧಿ ಹುನ್ನಾರಗಳನ್ನು ಕಾಂಗ್ರೆಸ್ ಪಕ್ಷ ವಿಧಾನಮಂಡಲದ ಎರಡೂ ಸದನಗಳಲ್ಲಿ ಎಳೆಎಳೆಯಾಗಿ ಬಿಡಿಸಿ ವಿರೋಧಿಸಲಿದೆ. ಯಾವುದೇ ಕಾರಣಕ್ಕೂ ಈ ಮಸೂದೆಯ ಅಂಗೀಕಾರಕ್ಕೆ ಅವಕಾಶ ನೀಡುವುದಿಲ್ಲ.