ಎನ್‍ಡಿಎ ಮೈತ್ರಿಕೂಟಕ್ಕೆ ಮತ್ತೆ ಬಿಹಾರ – ನಿತೀಶ್‍ಗೆ ಒಲಿದ ಸಿಎಂ ಪಟ್ಟ

Public TV
2 Min Read
BIHAR

– ಮಧ್ಯರಾತ್ರಿ ಪ್ರಕಟವಾಯ್ತು ಫಲಿತಾಂಶ

ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿತು. ಸಾಮಾನ್ಯವಾಗಿ ಬೇಗನೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ರೋಚಕ ಟ್ವಿಸ್ಟ್ ಕಂಡು ಕೊನೆಗೂ ಎನ್‍ಡಿಎ ಮೈತ್ರಿಕೂಟ ಭರ್ಜರಿಯಾಗಿ ಗೆಲುವು ಕಂಡಿತು.

ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಎನ್‍ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವಿನ ಹಾರವನ್ನ ತನ್ನ ಕೊರಳಿಗೆ ಹಾಕಿಕೊಂಡಿದೆ. ಮಂಗಳವಾರ ಬೆಳಗ್ಗಿನಿಂದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿ ಕೊನೆಗೆ ಮಧ್ಯರಾತ್ರಿ 2 ಗಂಟೆ ವೇಳೆಗೆ ಎನ್‍ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮತಎಣಿಕೆ ಆರಂಭವಾದಾಗಿನಿಂದಲೂ ತೂಗುಯ್ಯಾಲೆಯಲ್ಲಿ ಕುಳಿತಿದ್ದ ವಿಜಯಲಕ್ಷ್ಮೀ ಕೊನೆಗೂ ಎನ್‍ಡಿಎ ಕಡೆ ಒಲಿದಿದ್ದಾಳೆ.

Nitish Kumar

243 ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಡಿಎ ಮ್ಯಾಜಿಕ್ ನಂಬರ್ 122ನ್ನು ದಾಟಿ 125 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ. ಮಹಾಘಟಬಂಧನ್ 110 ಸ್ಥಾನಗಳಲ್ಲಿ ಗೆದ್ದಿದ್ದು, ಇತರರು 8ರಲ್ಲಿ ವಿಜಯದ ನಗೆ ಬೀರಿದ್ದಾರೆ. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿಯ ಏಕಾಂಗಿ ಹೋರಾಟದ ಹೊರತಾಗಿಯೂ ಮಹಾಘಟಬಂಧನ್ ಅಧಿಕಾರ ವಂಚಿತವಾಗಿದೆ.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್‌ಜೆಡಿ:
ಬಿಹಾರದಲ್ಲಿ ಮತದಾರ ಮೋದಿ-ನಿತೀಶ್ ಜೋಡಿಗೆ ಜೈ ಅಂದಿದ್ದಾನೆ. ಯಾವ್ಯಾವ ಪಕ್ಷದ ಎಷ್ಟೆಷ್ಟು ಸಾಧನೆ ಅಂತ ನೋಡೋದಾದ್ರೆ, ಬಿಜೆಪಿ 74 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರುವ ಮೂಲಕ ಎನ್‍ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

NitishTejashwi

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು, ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ನೀಡಿದ ಏಟಿನಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್‍ಜೆಡಿ 75 ಕ್ಷೇತ್ರದಲ್ಲಿ ಗೆದ್ದು ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನಿಂದ ನಿರೀಕ್ಷಿತ ಬೆಂಬಲ ಸಿಗದೇ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಇನ್ನು ಇನ್ನು, ವಿಕಾಸಶೀಲ ಇನ್ಸಾನ್ ಪಾರ್ಟಿ ಮತ್ತು ಜೀತನ್ ರಾಮ್ ಮಾಂಝಿ ಅವರ ಎಚ್‍ಎಎಂ ತಲಾ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹೀಗಾಗಿ ಜೆಡಿಯು ಕಳಪೆ ಸಾಧನೆಯ ಹೊರತಾಗಿಯೂ ಎಚ್‍ಎಎಂ ಮತ್ತು ವಿಐಪಿ ಉತ್ತಮ ಪ್ರದರ್ಶನದಿಂದ ಎನ್‍ಡಿಎ ತನ್ನಲ್ಲಿಯೇ ಅಧಿಕಾರ ಉಳಿಸಿಕೊಂಡಿದೆ.

NITHISH CHIRAG

ಸಾಮಾನ್ಯವಾಗಿ ಬೇಗನೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ವಿಳಂಬವಾಗಿದ್ದಂತೆ ಪ್ರಕ್ಷಗಳ ನಡುವೆ ಟೀಕೆಗಳು ಶುರುವಾದವು. ಈ ಟೀಕೆಗಳಿಗೆ ಚುನಾವಣಾ ಆಯೋಗ ಸ್ಪಷ್ಟ ಎಚ್ಚರಿಕೆಯನ್ನು ನೀಡಿತು. ಮರು ಮತ ಎಣಿಕೆಯ ಬಗ್ಗೆ ಭರವಸೆ ನೀಡಿತು. ಒಟ್ಟಿನಲ್ಲಿ ಭಾರೀ ಕುತೂಹಲಕ್ಕೆ ಕಾರಣವಾದ ಮ್ಯಾರಥಾನ್ ಚುನಾವಣಾ ಫಲಿತಾಂಶ ಎನ್‍ಡಿಎ ಮೈತ್ರಿಕೂಟ ಪಾಲಾಗಿದೆ. ಕೊರೊನಾ ಸಂಕಷ್ಟದ ನಡುವೆ ಬಿಹಾರ ಚುನಾವಣೆ ಹಿಂದೆಂದೂ ಕಾಣದ ಜಿದ್ದಾಜಿದ್ದಿಗೆ ಸಾಕ್ಷಿಯಾಯ್ತು.

Share This Article
Leave a Comment

Leave a Reply

Your email address will not be published. Required fields are marked *