ಲಕ್ನೋ: ಮೃತ ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ಸಹಚರನಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಇಂದು ಎನ್‍ಕೌಂಟರ್ ಗೆ ಬಲಿಯಾದ ವಿಕಾಸ್ ದುಬೆ ಮೃತದೇಹವನ್ನು ಪೊಲೀಸರು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ.
ಕಳೆದ ಎರಡು ದಿನದ ಹಿಂದೆ ವಿಕಾಸ್ ದುಬೆ ಬಲಗೈ ಬಂಟನಂತಿದ್ದ ಅಮರ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮುನ್ನ ಕೊರೊನಾ ಪರೀಕ್ಷೆ ಮಾಡಿಸಿದ್ದು, ಆತನಿಗೆ ಕೊರೊನಾ ಪಾಟಿಸಿವ್ ಬಂದಿತ್ತು. ಈ ಕಾರಣದಿಂದ ಇಂದು ಬೆಳಗ್ಗೆ ಎನ್‍ಕೌಂಟರ್ ಆದ ವಿಕಾಸ್ ದುಬೆ ಮೃತದೇಹವನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.
Advertisement
Advertisement
ಎಂಟು ಮಂದಿ ಪೊಲೀಸರನ್ನು ಅಮಾನುಷವಾಗಿ ಕೊಂದು ಹಾಕಿದ್ದ ಪ್ರಕರಣದಲ್ಲಿ, ಬುಧವಾರ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಸಿಬ್ಬಂದಿ ಪ್ರಮುಖ ಆರೋಪಿ ವಿಕಾಸ್ ದುಬೆ ಸಹಚರ ಅಮರ್ ದುಬೆಯನ್ನು ಎನ್‍ಕೌಂಟರ್ ಮಾಡಿತ್ತು. ಎನ್‍ಕೌಂಟರ್ ಗೆ ಬಲಿಯಾದ ಅಮರ್ ದುಬೆ ವಿಕಾಸ್ ದುಬೆ ಅಪ್ತನಾಗಿದ್ದು, ಈತ ಕೂಡ ಪೊಲೀಸರ ಮೇಲೆ ಗುಂಡು ಹಾರಿಸಿದ್ದ. ಅಮರ್ ಹೆಸರು ಕೂಡ ಎಫ್‍ಐಆರ್ ಅಲ್ಲಿ ಉಲ್ಲೇಖವಾಗಿತ್ತು.
Advertisement
Advertisement
ಗುರುವಾಗ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ವಿಕಾಸ್ ದುಬೆಯನ್ನು ಇಂದು ಮುಂಜಾನೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಮಧ್ಯಪ್ರದೇಶದ ಪೊಲೀಸರಿಂದ ದುಬೆಯನ್ನು ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ನಮ್ಮ ವಾಹನ ಅಪಘಾತವಾಗಿ ಪಲ್ಟಿಯಾಗಿತ್ತು. ಈ ವೇಳೆ ದುಬೆ ತಮ್ಮ ಪೊಲೀಸರ ಬಂದೂಕನ್ನು ಕಿತ್ತುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತನನ್ನು ಎನ್‍ಕೌಂಟರ್ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗ್ಯಾಂಗ್ ಅವರ ಮೇಲೆ ಗುಂಡಿನ ದಾಳಿ ಮಾಡಿ ಎಂಟು ಮಂದಿ ಪೊಲೀಸರನ್ನು ಕೊಂದು ಹಾಕಿತ್ತು.