ಹಾಸನ: ಎತ್ತಿನ ಹೊಳೆ ಯೋಜನೆಯ ಕಾಮಗಾರಿಗೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಬಾಲಕ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
Advertisement
ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿಡಿಗಳಲೆ ಗ್ರಾಮದ 13 ವರ್ಷದ ಋತ್ವಿಕ್ ಮೃತ ದುರ್ದೈವಿ. ದನ ಮೇಯಿಸಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಎತ್ತಿನ ಹೊಳೆ ಅವೈಜ್ಞಾನಿಕ ಕಾಮಗಾರಿಯೇ ಬಾಲಕನ ಸಾವಿಗೆ ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
Advertisement
ಇಂದು ಬೆಳಗ್ಗೆ ಋತ್ವಿಕ್ ದನ ಮೇಯಿಸಲು ಹೋಗಿದ್ದ ವೇಳೆ ಎತ್ತಿನಹೊಳೆ ಯೋಜನೆಯ ಪವರ್ ಪ್ಲಾಂಟ್ ಹೈಟೆನ್ಷನ್ ಯೋಜನೆಯ ತಂತಿ ಹಾದು ಹೋಗಲು ಟವರ್ ನಿರ್ಮಾಣಕ್ಕೆಂದು ತೆಗೆದಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಎತ್ತಿನ ಹೊಳೆ ಯೋಜನೆಗಾಗಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ನೀರು ತುಂಬಿದ್ದ ಗುಂಡಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ.
Advertisement
Advertisement
ಪೋಷಕರು ಮಗುವಿನ ಮೃತದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಾರೆ. ಇಷ್ಟಾದರೂ ಯಾರೂ ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.