ಚಾಮರಾಜನಗರ: ಬಾಗಿಲು ನಿರ್ಮಿಸದೆ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್ ಕಟ್ಟಿ ಗಾಂಜಾ ಬೆಳೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
Advertisement
ಜಿಲ್ಲೆಯ ಹನೂರು ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮನೆ ಬಳಿಯ ಕಾಂಪೌಂಡ್‍ನಲ್ಲೇ ಗಾಂಜಾ ಬೆಳೆಯುತ್ತಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಖತರ್ನಾಕ್ ವಿಧಾನ ಬಳಸಿ ಬರೋಬ್ಬರಿ 228 ಗಾಂಜಾ ಗಿಡಗಳನ್ನು ಬೆಳೆದಿದ್ದರು ಎನ್ನಲಾಗಿದೆ. ಮೂವರು ಆರೋಪಿಗಳಾದ ಅಳಿಯ ಗೋವಿಂದರಾಜು, ಮಾವ ಚಿನ್ನವೆಂಕಟಾಬೋವಿ ಹಾಗೂ ಬಾಮೈದುನ ಕುಮಾರ್ ಪರಾರಿಯಾಗಿದ್ದಾರೆ. ಮನೆಯ ಬಳಿ ಬೆಳೆದಿದ್ದ 154 ಕೆ.ಜಿ. ಹಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
Advertisement
Advertisement
ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆ ಬಳಿ ಯಾವುದೇ ಪ್ರವೇಶ ದ್ವಾರ ಇಲ್ಲದಂತೆ ಕಾಂಪೌಂಡ್ ನಿರ್ಮಿಸಿ ಮಾವ, ಅಳಿಯ ಹಾಗೂ ಮತ್ತೋರ್ವ ಸಂಬಂಧಿ ಗಾಂಜಾ ಬೆಳೆಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ರಾಮಾಪುರ ಠಾಣೆ ಪಿಎಸ್‍ಐ ಮನೋಜ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ಮಾದಕ ವಸ್ತು ವಶಪಡಿಸಿಕೊಂಡಿದೆ. ಸದ್ಯ ರಾಮಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮನೋಜ್ ಕುಮಾರ್ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಬಹುಮಾನ ಘೋಷಿಸಿದ್ದಾರೆ.