– ಹಣ ಹಂಚಿಕೆ ವೇಳೆ ಪ್ಲಾನ್ ಮಾಡಿ ಕೊಲೆ
ಬೆಂಗಳೂರು: ವಿವಿಧ ಬ್ಯಾಂಕ್ ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಮತ್ತು ಡ್ರೈವರ್ ಗಳಾಗಿದ್ದ ನಾಲ್ವರು ಸ್ನೇಹಿತರು ಏನಾದರೂ ಮಾಡಿ ಲಕ್ಷ ಲಕ್ಷ ಹಣ ಮಾಡಬೇಕು ಎಂದು ಪ್ಲಾನ್ ಮಾಡಿದ್ದು, ಎಟಿಎಂಗಳಿಗೆ ಹಣ ತುಂಬುವ ವಾಹನದಲ್ಲಿನ ದುಡ್ಡನೇ ಕದಿಯಲು ಪ್ಲಾನ್ ಮಾಡಿದ್ದಾರೆ, ಯಶಸ್ವಿ ಸಹ ಆಗಿದ್ದಾರೆ. ಆದರೆ ಸಿಕ್ಕಿಬೀಳುವ ಭಯದಲ್ಲಿ ಹಣ ಕದ್ದವನನ್ನೇ ಕೊಲೆ ಮಾಡಿದ್ದಾರೆ.
ನಗರದ ನಾಗವಾರದ ಬಳಿ ಎಟಿಎಂ ವಾಹನದಿಂದ ಹಣ ಕದ್ದೊಯ್ದಿದ್ದು, ಸಕಲೇಶಪುರದ ಬ್ಯುಟಿ ಸ್ಪಾಟ್ ಬಳಿ ಅಬ್ದುಲ್‍ನನ್ನು ಕೊಲೆ ಮಾಡಿದ್ದಾರೆ. ಪ್ರಕರಣರದ ಬೆನ್ನು ಹತ್ತಿದ ಗೋವಿಂದಪುರ ಪೊಲೀಸರು ಮಹೇಶ್, ಮಧುಸೂದನ್, ಪ್ರಸನ್ನ ಹಾಗೂ ಕುಮಾರ್ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಚಿನ್ನಾಭರಣ, ವಾಹನಗಳು ಸೇರಿ ಹದಿನೈದು ಲಕ್ಷ ರೂ. ನಗದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಈ ಭಯಾನಕ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಸಿಕ್ಕಿಬೀಳುವ ಭಯದಲ್ಲಿ ಕೊಲೆ
ಅಕ್ಸಿಸ್ ಬ್ಯಾಂಕ್ ನ ಎಟಿಎಂ ವಾಹನದಲ್ಲಿ ಡ್ರೈವರ್ ಆಗಿದ್ದ ಅಬ್ದುಲ್, ನಾನು ಹಣ ಕಳವು ಮಾಡುತ್ತೇನೆ, ನೀವು ನನಗೆ ಸಪೋರ್ಟ್ ಮಾಡಿ ಸಾಕು ಎಂದಿದ್ದ. ಅಬ್ದುಲ್ ನ ಮಾತಿನಂತೆ ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಾರದ ಅಕ್ಸಿಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬುವ ವೇಳೆ ಅದೇ ವಾಹನದ ಚಾಲಕ ಅಬ್ದುಲ್ ಬರೋಬ್ಬರಿ 75 ಲಕ್ಷ ರೂ. ಹಣ ಎತ್ಕೊಂಡು ಎಸ್ಕೇಪ್ ಆಗಿದ್ದ.
ಹಣ ಸಿಕ್ಕ ತಕ್ಷಣ ಮಹೇಶ್, ಮಧುಸೂದನ್, ಪ್ರಸನ್ನ ಹಾಗೂ ಕುಮಾರ್ ಚಾಲಕ ಅಬ್ದುಲ್ ಜೊತೆಗೂಡಿದ್ದಾರೆ. ಬಳಿಕ ಎಲ್ಲರೂ ಚಿಕ್ಕಮಗಳೂರು, ಶಿವಮೊಗ್ಗ ಅಂತೆಲ್ಲಾ ಸುತ್ತಾಡಿ, ಸಕಲೇಶಪುರದ ಬ್ಯುಟಿ ಸ್ಪಾಟ್ ಬಳಿ ಕೂತು ಹಣ ಹಂಚಿಕೆ ಶುರು ಮಾಡಿದ್ದರು. ಈ ವೇಳೆ ಪೊಲೀಸರಿಗೆ ಡ್ರೈವರ್ ಅಬ್ದುಲ್ ಕಳವಿನ ಬಗ್ಗೆ ಮಾಹಿತಿ ಸಿಕ್ಕಿದೆ. ಇದನ್ನು ಅರಿತ ಇತರೆ ಸಹಚರರು, ಇವತ್ತಲ್ಲಾ ನಾಳೆ ಅಬ್ದುಲ್ ಸಿಕ್ಕಿಬೀಳುತ್ತಾನೆ ಆಗ ನಾವೆಲ್ಲರೂ ಒಟ್ಟಿಗೆ ಸಿಕ್ಕಿಬೀಳುತ್ತೇವೆ. ಹೀಗಾಗಿ ಅಬ್ದುಲ್ ನನ್ನೇ ಕೊಲೆ ಮಾಡಿದರೆ ನಾವ್ಯಾರು ಸಿಕ್ಕಿಬಿಳಲ್ಲ, ಅರಾಮಾಗಿ ಹಣದೊಂದಿಗೆ ಸೆಟಲ್ ಆಗಬಹುದು ಎಂದು ಪ್ಲಾನ್ ಮಾಡಿದ್ದರು.
ಅದರಂತೆ ಅಬ್ದುಲ್ ನನ್ನ ಬ್ಯುಟಿ ಸ್ಪಾಟ್ ಬಳಿಯೇ ಕಟ್ಟಿಗೆಗಳಿಂದ ಹಲ್ಲೆ ಮಾಡಿ ಘಾಟಿಯಿಂದ ಕೆಳಗೆ ಎಸೆದು ಕೊಲೆ ಮಾಡಿದ್ದರು. ಈ ಸಂಬಂಧ ಆರೋಪಿಗಳ ಬೆನ್ನುಬಿದ್ದಿದ್ದ ಗೋವಿಂದಪುರ ಪೊಲೀಸರು, ಹಣದೊಂದಿಗೆ ಕೆ.ಆರ್.ಪೇಟೆಯಲ್ಲಿ ತಲೆಮರಿಸಿಕೊಂಡಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳು ಹಣ ಕದ್ದಿರುವುದು ಹಾಗೂ ಕೊಲೆಯ ಕುರಿತು ಬಾಯ್ಬಿಟ್ಟಿದ್ದಾರೆ.