ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿದ್ರೆ ಏನು ಉಪಯೋಗ?: ಹೆಚ್‍ಡಿಕೆ

Public TV
3 Min Read
Kumaraswamy

ಕೇಂದ್ರ, ರಾಜ್ಯ ಸರ್ಕಾರಗಳೂ ಕೋವಿಡ್ ವಿಷಯದಲ್ಲಿ ಎಡವಿದೆ
– ಕಾಳಸಂತೆಯಲ್ಲಿ ರೆಮ್‍ಡಿಸಿವಿರ್

ಬೆಂಗಳೂರು: ಕೊರೊನಾ ನಿಯಂತ್ರಣ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಪಕ್ಷಗಳನ್ನು ಸಭೆಗೆ ಕರೆದಿದ್ದಾರೆ. ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕವಾಗಿ ಆಕ್ರೋಶ ಹೊರಹಾಕಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಬಿಗಿ ಕ್ರಮ ಕೈಗೊಳ್ಳುವುದರ ಬಗ್ಗೆ ವಿಪಕ್ಷಗಳೊಂದಿಗೆ ಸಭೆ ನಡೆಸುವುದಾಗಿಯೂ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಕೋವಿಡ್ ಚಿಕಿತ್ಸೆಗೆ ಬೇಕಾಗುವ ಮೂಲಸೌಕರ್ಯ ಹೊಂದಿಸಿಟ್ಟುಕೊಳ್ಳದ, ರೋಗದ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳದ, ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳಿಗೆ ಕೊರೊನಾ 2ನೇ ಅಲೆ ಕಾಣಿಸಿಕೊಳ್ಳುವ ಎಚ್ಚರಿಕೆಗಳಿದ್ದವು. ಅದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆ ಕೋವಿಡ್ ಚಿಕಿತ್ಸೆಗೆ ಬಳಸಲಾಗುವ ರೆಮ್‍ಡಿಸಿವಿರ್ ಎಂಬ ಚುಚ್ಚು ಮದ್ದಿಗೆ ದೇಶದಲ್ಲಿ ಅಭಾವ ಸೃಷ್ಟಿಯಾಗಿದೆ. ಸೋಂಕಿತರಿಗೆ ಚಿಕಿತ್ಸೆಯೇ ಖಾತ್ರಿ ಇಲ್ಲದಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ರೆಮ್‍ಡಿಸಿವಿರ್ ಚುಚ್ಚುಮದ್ದನ್ನು ಇಷ್ಟ ಬಂದಂತೆ ರಫ್ತು ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಟೀಕೆಗಳು ಬರುತ್ತಲೇ, ಔಷಧಿಗೆ ಅಭಾವ ಎದುರಾಗುತ್ತಲೇ ರಫ್ತು ನಿಷೇಧಿಸಿದೆ. ಆದರೆ, ಈಗ ಕಾಲ ಮಿಂಚಿದೆ. ಒಂದೆಡೆ ಕೋವಿಡ್ ಪ್ರಕರಣಗಳು ದಿಢೀರ್ ಏರಿಕೆಯಾಗಿದೆ. ಆದರೆ, ದೇಶದ ಆಸ್ಪತ್ರೆಗಳು ರೆಮ್‍ಡಿಸಿವಿರ್‍ಗಾಗಿ ಕಾದು ಕೂರುವ ಪರಿಸ್ಥಿತಿ ಉದ್ಭವಿಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ರೆಮ್‍ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ, ನಕಲಿ ಔಷಧ ಪೂರೈಕೆಯಾಗುತ್ತಿರುವ ಪ್ರಕರಣಗಳು ವರದಿಯಾಗಿವೆ. ಒಂದೆಡೆ ಔಷಧದ ದಾಸ್ತಾನು ಮಾಡದೇ ವಿಫಲವಾಗಿರುವ ಸರ್ಕಾರ, ಕಾಳ ಸಂತೆ, ನಕಲಿ ಹಾವಳಿ ನಿಯಂತ್ರಿಸದೇ ಅದಕ್ಷತೆ ಮೆರೆದಿದೆ. ಇಲ್ಲಿ ಕೇಂದ್ರ, ರಾಜ್ಯ ಎಂಬ ಮಾತಿಲ್ಲ. ಎರಡೂ ಸರ್ಕಾರಗಳೂ ಕೋವಿಡ್ ವಿಷಯದಲ್ಲಿ ಎಡವಿವೆ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಿಸುವ ವಿಚಾರದಲ್ಲಿ ಸರ್ಕಾರಗಳಿಗೆ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ, ಎಚ್ಚರಿಕೆಗಳನ್ನು ಕಡೆಗಣಿಸಿ, ನಾಗರಿಕರ ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ನಡೆಗಳು ಖಂಡನೀಯ. ಸರ್ಕಾರಗಳು ಕನಿಷ್ಠ, ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನಾದರೂ ದಾಸ್ತಾನು ಮಾಡಿಕೊಳ್ಳಬೇಕು. ಅದಿಲ್ಲದೇ, ಸಭೆಗಳನ್ನು ನಡೆಸಿ ಪ್ರಯೋಜನವಿಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *