ಚಿಕ್ಕಮಗಳೂರು: ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ. ಕಾರ್ಯಕರ್ತನಷ್ಟೆ. ನಾನೆಂದೂ ಮಾಲೀಕನಂತೆ ವರ್ತಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಜಿಲ್ಲೆಯಲ್ಲಿ ಶಾಸಕ ಸಿ.ಟಿ.ರವಿ ಅವರ ಮೂಗಿನ ನೇರಕ್ಕೆ ಎಲ್ಲವೂ ನೆಡೆಯುತ್ತಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ನೇರವಾಗಿ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ನಾನು ಮಂತ್ರಿ ಅಲ್ಲ. ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರು ಯಾವ ಹಿನ್ನೆಲೆಯಲ್ಲಿ ಏಕೆ ಹೀಗೆ ಮಾತನಾಡಿದ್ದಾರೋ ಗೊತ್ತಿಲ್ಲ. ಅವರೊಂದಿಗೆ ಮಾತನಾಡುತ್ತೇನೆ ಎಂದರು. ಇನ್ನು ವರ್ಗಾವಣೆ ಮಾಡುವ ಅಧಿಕಾರ ನನಗಿಲ್ಲ. ನಾನು ಹೆಚ್ಚೆಂದರೆ ಶಿಫಾರಸ್ಸು ಪತ್ರ ನೀಡಬಹುದು ಅಷ್ಟೆ ಎಂದರು.
ರಾಜಕಾರಣದ ಸೂಕ್ಷ್ಮಗಳು ನನಗೆ ಅರ್ಥವಾಗುತ್ತದೆ. ವರ್ಗಾವಣೆ ಮಾಡುವುದು ನನ್ನ ಕೆಲಸವಲ್ಲ. ವರ್ಗಾವಣೆ ಶಿಫಾರಸ್ಸು ಪತ್ರ ಯಾರು ಬಂದರು ಕೊಡುತ್ತೇನೆ. ವರ್ಗಾವಣೆ ಮಾಡುವುದು ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದರು. ನಾನು ಬಿಜೆಪಿಯ ಮಾಲೀಕನಲ್ಲ. ಕಾರ್ಯಕರ್ತನಷ್ಟೆ. ಯಾರು ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೋ ಅವರೆಲ್ಲರೂ ಕಾರ್ಯಕರ್ತರೆ. ಅವರು ಯಾಕೆ ಈ ರೀತಿ ಆರೋಪ ಮಾಡಿದ್ದಾರೆಂದು ಗೊತ್ತಿಲ್ಲ. ಕೇಳುವಂತಹ ವೇದಿಕೆಯಲ್ಲಿ ಕೇಳುತ್ತೇನೆ ಎಂದರು. ಇದನ್ನೂ ಓದಿ: ಒಡೆದ ಮನಗಳ ಸರಿ ಮಾಡಿ: ಉದ್ಯಮದ ಹಿರಿಯರು, ವಾಣಿಜ್ಯ ಮಂಡಳಿಗೆ ಜಗ್ಗೇಶ್ ಮನವಿ