ಕಲಬುರಗಿ: ಎಂಪಿ ಎಂಎಲ್‍ಎ ನಮ್ಮ ಮನೆಯೊಳಗೆ ಇದ್ದಾರೆ ಎಂದು ಪೊಲೀಸ್ ಪೇದೆಯೊಬ್ಬ ರೈತನ ಮೇಲೆ ದರ್ಪ ತೋರಿಸಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಔರಾದ್ ಗ್ರಾಮದಲ್ಲಿ ನಡೆದಿದೆ.
ರೈತ ಅಶೋಕ ಮೇಲೆ ಜೇವರ್ಗಿ ಠಾಣೆ ಪೇದೆ ತಾರಾಸಿಂಗ್ ನಾಯ್ಕ್ ದರ್ಪ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಎಂಪಿ ಎಮ್‍ಎಲ್‍ಎಗಳು ನಮ್ಮ ಮನೆಯಲ್ಲಿದ್ದಾರೆ. ಏನು ಮಾಡಿಕೊಳ್ತಿಯಾ ಮಾಡಿಕೋ ಹೋಗು ಎಂದು ಪೊಲೀಸಪ್ಪ ರೈತನನ್ನು ಎಳೆದಾಡಿದ್ದಾನೆ.
ಔರಾದ್ ಕ್ರಾಸ್‍ನಲ್ಲಿ ಪೆಟ್ರೋಲಿಂಗ್ ವಾಹನದ ಪೊಲೀಸರು ಲಾರಿಯೊಂದನ್ನು ಹಿಡಿದಿದ್ದರು, ಈ ವೇಳೆ ಲಾರಿ ಚಾಲಕ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿತ್ತು. ಇದನ್ನು ನೋಡಿಕೊಂಡು ನಿಂತಿದ್ದ ರೈತ ಅಶೋಕನ ಮೇಲೆ ಪೊಲೀಸಪ್ಪನಿಗೆ ಸಿಟ್ಟು ಬಂದಿದೆ. ಈ ಕ್ಷುಲ್ಲಕ ಕಾರಣಕ್ಕೆ ಸಿಟ್ಟಾದ ತಾರಾಸಿಂಗ್ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದೀಯಾ ಎಂದು ಜಗಳ ಮಾಡಿದ್ದಾನೆ. ನಂತರ ಸ್ಥಳೀಯರು ಬಂದು ಪೇದೆಗೆ ಸಮಾಧಾನ ಮಾಡಿದ್ದಾರೆ.