ಧಾರವಾಡ: ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆದಲ್ಲಿ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಲಿದ್ದಾರೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಅರವಿಂದ್ ಬೆಲ್ಲದ್, ಯತ್ನಾಳ್, ಮುರಗೇಶ್ ನಿರಾಣಿ ಹಾಗೂ ನಾನು ಸೇರಿದಂತೆ ಈ ನಾಲ್ವರಲ್ಲಿ ಯಾರು ಬೇಕಾದರೂ ಸಿಎಂ ಆಗಬಹುದು ಎಂದರು.
ನಾನು 8 ಸಲ ಎಂಎಲ್‍ಎ ಆದವನು, 6 ಇಲಾಖೆ ನಿರ್ವಹಿಸಿದವನು, ನನಗೆ ಅನುಭವ ಚೆನ್ನಾಗಿದೆ, ಮುಖ್ಯಮಂತ್ರಿ ಆಗುವ ಯೋಗ್ಯತೆ ನನಗಿದೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ, ಕಳಂಕ ರಹಿತ ಶಾಸಕನಾಗಿದ್ದೆನೆ ಎಂದರು. ಇದನ್ನೂ ಓದಿ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ – ಗುಡುಗಿದ ದರ್ಶನ್
ಪಕ್ಷ ತೀರ್ಮಾನ ಮಾಡಿದರೆ ಸಿಎಂ ಆಗುವ ಆಸೆ ಇದೆ, ಸಿಎಂ ಆದ ಮೇಲೆ ಪ್ರಧಾನಿಯಾಗುವ ಅಸೆಯೂ ಇರುತ್ತದೆ ಎನ್ನುವ ಮೂಲಕ ತಾವು ಸಿಎಂ ಆಗಬೇಕು ಎನ್ನುವುದನ್ನು ಪುನರುಚ್ಛರಿಸಿದ ಅವರು, ಈಗ ಸದ್ಯಕ್ಕೆ ನಾವು ಅಖಂಡ ಕರ್ನಾಟಕದಲ್ಲಿ ಬದುಕಿದ್ದೇನೆ, ಹೀಗಾಗಿ ನಾನು ಅಖಂಡ ಕರ್ನಾಟಕ ಸಿಎಂ ಆಗುತ್ತೇನೆ. ಏನಾದರೂ ಉತ್ತರ ಕರ್ನಾಟಕ ತೊಂದರೆ ಆದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವೆ, ಉತ್ತರ ಕರ್ನಾಟಕಕ್ಕೆ ಆಗುವ ತೊಂದರೆ ಮುಂದುವರಿದರೆ ನಾನು ಮತ್ತೆ ಧ್ವನಿ ಎತ್ತುವೆ ಎಂದರು.
ದಿನಾ ಬೆಳಗ್ಗೆ ಎದ್ದ ತಕ್ಷಣ ಉತ್ತರ ಕರ್ನಾಟಕ ಒಡೆಯಲು ಆಗುವುದಿಲ್ಲ. ತೊಂದರೆ ಆದಾಗ ಕೂಗು ಎಬ್ಬಿಸಬೇಕಾಗುತ್ತದೆ ಎಂದ ಅವರು, ಉತ್ತರ ಕರ್ನಾಟಕ ಒಡೆಯುವ ಉದ್ದೇಶ ನನಗಿಲ್ಲ. ಅಖಂಡ ಕರ್ನಾಟಕದಲ್ಲಿ ಬದುಕಬೇಕು, ಅದನ್ನು ಆಳಬೇಕು ಎನ್ನುವ ಉದ್ದೇಶ ಇದೆ ಎಂದು ಹೇಳಿದರು. ಇದನ್ನೂ ಓದಿ: ಸುಮಲತಾ ಬೇಬಿ ಬೆಟ್ಟಕ್ಕೆ ಬನ್ನಿ ಅಂದ್ರೆ ಬರುತ್ತೇನೆ: ಪುಟ್ಟರಾಜು
ಅರವಿಂದ್ ಬೆಲ್ಲದ್ ಯಾಕೆ ಸಿಎಂ ಆಗಬಾರದು, ಅವರ ತಂದೆ ಶಾಸಕರಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಬೆಲ್ಲದ್ ಎರಡು ಸಲ ಶಾಸಕರಾಗಿದ್ದಾರೆ ಎಂದು ಉಮೇಶ್ ಕತ್ತಿ ಹೇಳಿದರು.