ಬೆಂಗಳೂರು: ಎಂಜಿನಿಯರಿಂಗ್ ಕಾಲೇಜು ಶುಲ್ಕ ಹೆಚ್ಚಳ ವಿಚಾರವಾಗಿ ಸರ್ಕಾರ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳ ವಿಚಾರವಾಗಿ ಇನ್ನು ಯಾವುದೇ ತೀರ್ಮಾನ ಸರ್ಕಾರ ಮಾಡಿಲ್ಲ. ವಿಟಿಯು ವಿಸಿ ನೇತೃತ್ವದಲ್ಲಿ ಈಗಾಗಲೇ ಕಮಿಟಿ ರಚನೆ ಮಾಡಲಾಗಿದೆ. ಮ್ಯಾನೆಜ್‍ಮೆಂಟ್ ಕಾಲೇಜುಗಳ ಜೊತೆಯೂ ಸಭೆ ಮಾಡಿ ಅಂತಿಮ ತೀರ್ಮಾನ ಮಾಡಲಾಗುವುದು. ಸಭೆ ಮಾಡುವವರೆಗೂ ಶುಲ್ಕ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಪ್ರತಿ ವರ್ಷ ಸರ್ಕಾರಕ್ಕೆ ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಡುತ್ತವೆ. ಸರ್ಕಾರ ಖಾಸಗಿ ಸಂಸ್ಥೆಗಳ ಜೊತೆ ಸಭೆ ನಡೆಸಿ ಶುಲ್ಕ ಹೆಚ್ಚಳದ ನಿರ್ಧಾರ ಮಾಡುತ್ತದೆ.
ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಈ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳಿ ಬೇಡಿಕೆ ಇಟ್ಟಿವೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಹೋದಲ್ಲಿ, ಬಂದಲ್ಲಿ ಶುಭಕೋರಿ ಕಟೌಟ್ ಹಾಕಬೇಡಿ: ಸಿಎಂ ಬೊಮ್ಮಾಯಿ
ಪ್ರತಿ ವರ್ಷ ಶೇ.10 ರಿಂದ ಶೇ.15 ಶುಲ್ಕ ಹೆಚ್ಚಳಕ್ಕೆ ಸರ್ಕಾರ ಅನುಮತಿ ಕೊಡುತ್ತಿತ್ತು. ಆದರೆ ಸರ್ಕಾರ ಈ ವರ್ಷ ಎಷ್ಟು ಹೆಚ್ಚಳಕ್ಕೆ ಅವಕಾಶ ಕೊಡುತ್ತದೆ ಕಾದು ನೋಡಬೇಕಿದೆ.