ಮಡಿಕೇರಿ: ಕೋವಿಡ್ ಮೊದಲ ಅಲೆಯಲ್ಲಿ ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆ ಎರಡನೇ ಅಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ್ದ ಜಿಲ್ಲೆಯಾಗಿ ಪರಿವರ್ತನೆಯಾಗಿತ್ತು. ಇದನ್ನು ಗಮನಿಸಿದ್ದ ಜಿಲ್ಲೆಯ ಇಬ್ಬರು ಶಾಸಕರು ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ಇನ್ನಿಲ್ಲದ ಸರ್ವ ಪ್ರಯತ್ನಗಳನ್ನು ಮಾಡಿದರು. ಅದರ ಪರಿಣಾಮ ಇಂದು ಕೊಡಗು ಜಿಲ್ಲೆಯ 80ಕ್ಕೂ ಹೆಚ್ಚು ಗ್ರಾಮಗಳು ಕೋವಿಡ್ ಮುಕ್ತವಾಗಿವೆ ಎನ್ನೋದು ನಿಜಕ್ಕೂ ಮೆಚ್ಚುಗೆಯ ವಿಷಯವೇ ಸರಿ.
Advertisement
ಹೌದು. ಜಿಲ್ಲೆಯಲ್ಲಿ ಎರಡು ವಾರಗಳ ಹಿಂದಿನ ಸ್ಥಿತಿಯನ್ನು ಗಮನಿಸಿದರೆ ನಿತ್ಯ ಕನಿಷ್ಠ 500 ರಿಂದ 600 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಇದು ಕೊಡಗು ಜಿಲ್ಲೆಯಲ್ಲಿರುವ 6 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ತೀವ್ರ ಆತಂಕದ ವಿಷಯವೇ ಆಗಿತ್ತು. ಆದರೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ 180 ರಿಂದ 190ರ ಆಸುಪಾಸಿನಲ್ಲಿ ದಾಖಲಾಗುತ್ತಿವೆ. ಅದರಲ್ಲೂ ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ನಿತ್ಯ ಕೇವಲ 40 ರಿಂದ 50 ಪ್ರಕರಣಗಳು ಮಾತ್ರವೇ ದಾಖಲಾಗುತ್ತಿವೆ. ಆದರೆ ವ್ಯಾಪ್ತಿಯಲ್ಲಿ ತುಂಬಾ ದೊಡ್ಡದಾಗಿರುವ ಸೋಮವಾರಪೇಟೆ ತಾಲೂಕಿನಲ್ಲಿ ಕೊಂಚ ಜಾಸ್ತಿ ಪ್ರಕರಣಗಳು ದಾಖಲಾಗುತ್ತಿವೆ. ಬರೋಬ್ಬರಿ 37 ಗ್ರಾಮಗಳು ಕೋವಿಡ್ ಮುಕ್ತವಾಗಿವೆ. ಇದಕ್ಕೆ ಆಯಾ ಗ್ರಾಮಗಳಲ್ಲಿ ಇರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯು ನಿರ್ವಹಿಸಿದ ಕಾರ್ಯದ ಪರಿಯೇ ಕಾರಣ ಎನ್ನೋದು ಶಾಸಕರ ಮಾತು.
Advertisement
Advertisement
ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 51 ಗ್ರಾಮ ಪಂಚಾಯ್ತಿ, ಎರಡು ಪಟ್ಟಣ ಪಂಚಾಯ್ತಿ ಮತ್ತು ಒಂದು ನಗರಸಭೆ ಇದ್ದು, ಅವುಗಳಲ್ಲಿ 37 ಗ್ರಾಮಗಳು ಕೋವಿಡ್ ಮುಕ್ತವಾಗಿವೆ. ಇನ್ನು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ 38 ಗ್ರಾಮ ಪಂಚಾಯ್ತಿಗಳಿದ್ದು, ಅವುಗಳಲ್ಲಿ 10 ಪಂಚಾಯ್ತಿಗಳಲ್ಲಿ ಮಾತ್ರವೇ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಉಳಿದ 28 ಪಂಚಾಯ್ತಿಗಳೇ ಸಂಪೂರ್ಣ ಕೋವಿಡ್ ಮುಕ್ತವಾಗಿವೆ.
Advertisement
ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರತೀ ಗ್ರಾಮ ಪಂಚಾಯ್ತಿಗಳ ಪ್ರತೀ ಗ್ರಾಮಗಳಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿ ಅವರುಗಳನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಂತು ಪ್ರತೀ ಗ್ರಾಮದ 50 ಮನೆಗಳಿಗೆ ಒಂದು ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ. ಈ ಸಮಿತಿ ಪ್ರತೀ ತಮ್ಮ ವಾರ್ಡಿನ ಎಲ್ಲಾ ಸದಸ್ಯರಿಗೆ ಕೋವಿಡ್ ಟೆಸ್ಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೋವಿಡ್ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಶಾಸಕರು ಹೇಳಿದ್ದಾರೆ.