ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೋಗಲಾಗದೆ ಹತಾಶೆಗೊಂಡಿದ್ದ ಕೇರಳದ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ಮೂಲತಃ ಕೇರಳದ ಮಲ್ಲಪ್ಪುರಂನ ನಿವಾಸಿ ಅಂಜುಂ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಂಜುಂ ನಗರದ ಕೆಎಸ್‍ಆರ್‍ಟಿಸಿ ಬಳಿ ಇರುವ ಮಯೂರು ಹೋಟೆಲ್‍ನಲ್ಲಿ ಕೆಲಸ ಮಾಡಿಕೊಂಡಿದ್ದ.
ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿಂದ ಹೋಟೆಲ್ ನಲ್ಲೇ ಉಳಿದುಕೊಂಡಿದ್ದ. ಕೆಲ ದಿನಗಳಿಂದ ತನ್ನನ್ನು ಊರಿಗೆ ಕಳುಹಿಸಿಕೊಡುವಂತೆ ಮಾಲೀಕರಲ್ಲಿ ಈಗ ಹಠ ಹಿಡಿದಿದ್ದ. ಆದರೆ ಲಾಕ್‍ಡೌನ್ ಹಿನ್ನೆಲೆ ಕೇರಳಕ್ಕೆ ಬಸ್ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಹಾಗಾಗಿ ಬಸ್ ಸಂಚಾರ ಆರಂಭವಾದ ಮೇಲೆ ಕಳುಹಿಸಿಕೊಡುವುದಾಗಿ ಹೋಟೆಲ್ ಮಾಲೀಕರು ಹೇಳಿದ್ದರು ಎನ್ನಲಾಗಿದೆ.
ಅಂಜುಂ ಗುರುವಾರ ರಾತ್ರಿ ಹೋಟೆಲ್ ರೂಮ್‍ನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಂಜುಂ ಮೃತಪಟ್ಟಿದ್ದಾನೆ.



