ದಾವಣಗೆರೆ: ಶಾಸಕ ರೇಣುಕಾಚಾರ್ಯ ಕೊರೊನಾ ಸಂಕಷ್ಟದ ಸಮಯದಲ್ಲಿ ಮಿಂಚಿನ ವೇಗದಲ್ಲಿ ಕೆಲಸ ಮಾಡುವ ಮೂಲಕ ಕ್ಷೇತ್ರದ ಜನತೆಯ ಮನ ಗೆದ್ದಿದ್ದಾರೆ. ಅದೇ ರೀತಿ ಇದೀಗ ಉಳುಮೆ ಮಾಡಿ, ಬೀಜ ಬಿತ್ತುವ ಮೂಲಕ ತಮ್ಮ ಅಭಿಮಾನಿಯನ್ನು ಸಂತಸಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಅವರು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ, ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಬಿತ್ತನೆ ಕಾರ್ಯ ಮಾಡುತ್ತಿದ್ದರು, ಇವರು ಉಳುಮೆ ಮಾಡುತ್ತಿದ್ದ ಹೊಲದ ಬಳಿಯ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಎಂ.ಪಿ.ರೇಣುಕಚಾರ್ಯ, ಜಮೀನಿಗೆ ಭೇಟಿ ನೀಡಿ ಅವರ ಅಪೇಕ್ಷೆಯಂತೆ ಜೊತೆಗೂಡಿ ಬೇಸಾಯ ಮಾಡಿ, ಬೀಜ ಬಿತ್ತುವ ಮೂಲಕ ಉತ್ಸಾಹ ತುಂಬಿದರು.
ಶಾಸಕ ರೇಣುಕಾಚಾರ್ಯ ಮತ್ತೊಂದು ಮನಮುಟ್ಟುವ ಕೆಲಸ ಮಾಡಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈಗಾಗಲೇ ಹಲವು ದಿನಗಳಿಂದ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಹೂಡಿ ಸೋಂಕಿತರ ಸೇವೆ ಮಾಡುತ್ತಿರುವ ರೇಣುಕಾಚಾರ್ಯ, ಕೇರ್ ಸೆಂಟರ್ ನಲ್ಲಿದ್ದ ಇಬ್ಬರು ಬಾಲಕಿಯರ ಹುಟ್ಟುಹಬ್ಬ ಆಚರಿಸಿದ್ದಾರೆ. ತಂದೆ, ತಾಯಿ ಊರಲ್ಲಿದ್ದರಿಂದ ಮಕ್ಕಳ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಯಾರೂ ಇಲ್ಲ ಎಂಬ ಕೊರಗನ್ನು ನೀಗಿಸಿದ್ದಾರೆ. ಬಾಲಕಿಯರಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬದ ಶುಭಕೋರಿದ್ದಾರೆ.