– ನನ್ನನ್ನು ಪ್ರಶ್ನಿಸಲು ಕಟೀಲ್ ಗೃಹ ಸಚಿವರೇ?
ಮಂಗಳೂರು: ಉಪ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಸೋಲಿನ ಕುರಿತು ವ್ಯಾಪಕವಾಗಿ ಚರ್ಚೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆರ್‍ಆರ್ ನಗರ, ಶಿರಾ ಉಪಚುನಾವಣೆಯಲ್ಲಿ ಸೋಲಿನ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿದ್ಯಾವಂತರು ಕಾಂಗ್ರೆಸ್‍ಗೆ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ. ಮತದಾರ ಹೇಳಿದ್ದು ತಪ್ಪಿದೆಯಾ? ಮತ ಬಿದ್ದಿರೋದು ತಪ್ಪಿದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಸೋಲಾಗಿದೆ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಹೇಳೊದೆಲ್ಲಾ ಸುಳ್ಳಿನ ಕಂತೆ. 10 ವರ್ಷಕ್ಕೆ ಮಾತ್ರ ಅವರು ಸೀಮಿತ ಆಗೋದು ಬೇಡಾ. 100 ವರ್ಷ ಅವರ ಪಾರ್ಟಿ ಮಾನವ ಜೀವಿ ಕೊನೆಯಾಗುವವರೆಗೂ ಅವರೇ ಅಧಿಕಾರದಲ್ಲಿರಲಿ. ನಳಿನ್ ಕುಮಾರ್ ಕಟೀಲ್‍ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಟಾಂಗ್ ನೀಡಿದರು.
ಡಿಜಿಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸಂಪತ್ ರಾಜ್‍ಗೆ ಡಿಕೆಶಿ ರಕ್ಷಣೆ ನೀಡುತ್ತಿದ್ದಾರೆ ಎಂಬ ಕಟೀಲ್ ಆರೋಪಕ್ಕೆ, ನಾನು ಸಂಪತ್ ರಾಜ್ ಅವರಿಗೆ ರಕ್ಷಣೆ ಕೊಟ್ಟಿರುವ ಆರೋಪ ನಿಜವಾದರೆ ನನ್ನನ್ನು ಬಂಧಿಸಬಹುದು. ಈಗಾಗಲೇ ನನ್ನನ್ನು ಬಂಧಿಸಲಾಗಿದೆ. ಮುಂದೆಯೂ ಅರೆಸ್ಟ್ ಮಾಡುವುದಾದರೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಏನೇನು ತೊಂದರೆ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ ಎಲ್ಲವನ್ನು ಕೊಡಲಿ. ಎಲ್ಲಾ ನೋಟಿಸ್ ಬರುತ್ತಿದೆ. ಇನ್ನೊಂದು ನೋಟಿಸ್ ಸಹ ಕೊಡಲಿ. ಇದನ್ನೆಲ್ಲಾ ಕೇಳಲು ನಳಿನ್‍ಕುಮಾರ್ ಕಟೀಲ್ ಏನು ಗೃಹಸಚಿವರಾ ಎಂದು ಡಿಕೆಶಿ ಪ್ರಶ್ನಿಸಿ ತಿರುಗೇಟು ನೀಡಿದರು.