ಚಿಕ್ಕಮಗಳೂರು: ವಿವಾಹದ ಔತಣಕೂಟದಲ್ಲಿ ಭಾಗವಹಿಸಿದವರ ಹಲ್ಲುಗಳು ಜುಮ್ ಎನ್ನುವಂತಾಗಿದ್ದು, ಉಪ್ಪಿನ ಪಾಕೆಟ್‍ನಲ್ಲಿನ ಭಾರೀ ಪ್ರಮಾಣದ ಕಲ್ಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿಯ ಹೆಮ್ಮದಿ ಗ್ರಾಮದಲ್ಲಿ ಮದುವೆ ನಡೆದಿತ್ತು. ಸರದಿ ಸಾಲಲ್ಲಿ ಊಟಕ್ಕೆ ಕೂತವರು ಕಲ್ಲು ಅನ್ನದಲ್ಲೋ, ಮಟನ್‍ನಲ್ಲೋ ಎಂದು ಗೊಂದಲಕ್ಕೀಡಾಗಿದ್ದರು. ಹೆಮ್ಮದಿ ಗ್ರಾಮದ ರತನ್ ಅವರು ಸ್ನೇಹಿತರು ಹಾಗೂ ನವದಂಪತಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಊಟಕ್ಕೆ ಕೂತಾಗ ಊಟದಲ್ಲಿ ಬರೀ ಕಲ್ಲು ಸಿಕ್ಕಿತ್ತು.
ಊಟಕ್ಕೆ ಕೂತವರು ಕಲ್ಲು ಅನ್ನದ್ದೋ, ಮಟನ್ನದ್ದೋ ಎಂದು ಹುಡುಕಾಟ ನಡೆಸಿದ್ದರು. ಎಲ್ಲ ಕಡೆ ಹುಡುಕಾಡಿದ ಬಳಿಕ ಕೊನೆಯಲ್ಲಿ ಉಪ್ಪಿನ ಪಾಕೆಟ್ ತೆರದು ನೋಡಿದರೆ ಅದರಲ್ಲಿ ಅರ್ಧ ಕಲ್ಲು. ಇನ್ನರ್ಧ ಉಪ್ಪು. ಕಲ್ಲೆಂದರೆ ನೋಡುವವರ ಕಣ್ಣಿಗೆ ಉಪ್ಪೇ ಎಂದು ಗೋಚರಿಸುತ್ತದೆ. ಆದರೆ ಕಲ್ಲುಗಳನ್ನು ಉಪ್ಪಿನ ಪಾಕೆಟ್‍ನಲ್ಲಿ ತುಂಬಲಾಗಿದೆ. ಉಪ್ಪನ್ನು ನೀರಿನ ಪಾತ್ರೆಗೆ ಹಾಕಿ ಕರಗಿಸಿದರೆ ಅರ್ಧ ಮಾತ್ರ ಕರಗಿದ್ದು ಇನ್ನರ್ಧ ಕರಗಿಲ್ಲ.
ಕಲ್ಲಿನಿಂದಾಗಿ ಸರದಿ ಸಾಲಲ್ಲಿ ಊಟಕ್ಕೆ ಕೂತವರು ಸರಿಯಾಗಿ ಊಟ ಮಾಡದಂತಾಗಿದೆ. ಸ್ನೇಹಿತರು, ನವದಂಪತಿಗಳನ್ನ ಊಟಕ್ಕೆ ಕರೆದು ಹೀಗಾಯ್ತಲ್ಲ ಎಂದು ಅಂಗಡಿ ಮಾಲೀಕನಿಗೆ ಫೋನ್ ಮಾಡಿದರೆ ಆತ ನಾನು ವ್ಯಾಪಾರಸ್ಥ ಎಂದು ಹೇಳಿದ್ದಾರೆ. ಬಳಿಕ ಆತನಿಂದ ನಂಬರ್ ಪಡೆದು ಮೇನ್ ಡೀಲರ್‍ಗೆ ಕರೆ ಮಾಡಿದರೆ ಆತ ಹಾರಿಕೆ ಉತ್ತರ ನೀಡಿದ್ದಾರೆ. ಚಿಕ್ಕಮಗಳೂರಿನ ಸಬ್ ಡೀಲರ್‍ಗೆ ಕರೆ ಮಾಡಿದರೆ ಆತ ಬೇಕಾಬಿಟ್ಟಿ ಉತ್ತರಿಸಿದ್ದಾರೆಂದು ಔತಣಕೂಟ ಏರ್ಪಡಿಸಿದ್ದ ರತನ್ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಉಪ್ಪಿನ ಬಗ್ಗೆ ಸಂಶಯ ಪಡುವುದಿಲ್ಲ. ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಅಕ್ಕಿ, ರಾಗಿ, ಗೋಧಿಯಲ್ಲಿ ಕಲ್ಲು ಬಂದಿದ್ದಾಯಿತು. ಈಗ ಉಪ್ಪಿನಲ್ಲೂ ಕಲ್ಲು ಬರುವ ಕಾಲ ಬಂದಿದೆ. ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದ ಇರಬೇಕೆಂದು ಘಟನೆಯಿಂದ ನೊಂದ ರತನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೊಡ್ಡವರು ಕಲ್ಲು ಸಿಕ್ಕರೆ ತೆಗೆದು ಹಾಕುತ್ತಾರೆ. ಆದರೆ ಮಕ್ಕಳು ಅವುಗಳನ್ನ ತಿಂದರೆ ಅನಾರೋಗ್ಯ ಗ್ಯಾರಂಟಿ. ಆದ್ದರಿಂದ ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ.