ಉಪಸಮರಕ್ಕೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು – ನಾಲ್ಕು ಕ್ಷೇತ್ರ, ಯಾರು? ಎಲ್ಲಿಂದ ಸ್ಪರ್ಧೆ?

Public TV
2 Min Read
Congress JDS BJP

ಬೆಂಗಳೂರು: ಮೂರು ವಿಧಾನಸಭಾ ಕ್ಷೇತ್ರ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿದ್ದು, ಶನಿವಾರ ಅಥವಾ ಮುಂದಿನ ವಾರ ಎಲೆಕ್ಷನ್ ದಿನಾಂಕ ಘೋಷಣೆ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಆರಂಭಿಸಿದ್ದು, ಮತ್ತೊಂದು ಕಡೆ ಟಿಕೆಟ್ ಆಕಾಂಕ್ಷಿಗಳು ಲಾಬಿಗೆ ಮುಂದಾಗಿದ್ದಾರೆ. ಕೆಲವರು ದೆಹಲಿ ಮಟ್ಟದಲ್ಲಿಯೂ ಲಾಬಿಗೆ ಮುಂದಾಗಿ, ಬಹಿರಂಗವಾಗಿಯೇ ತಾವು ಟಿಕೆಟ್ ಆಕಾಂಕ್ಷಿಗಳೆಂದು ಹೇಳುತ್ತಿದ್ದಾರೆ.

Congress BJP JDS 1 1

2020ರಲ್ಲಿ ನಡೆದ ಎರಡು ಕ್ಷೇತ್ರಗಳಿಗೆ (ಆರ್.ಆರ್.ನಗರ ಮತ್ತು ಶಿರಾ) ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಗೆಲುವಿನ ಹುಮ್ಮಸ್ಸಿನಲ್ಲಿರುವ ಕಮಲ ಪಾಳಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರಿಸಲು ಭರ್ಜರಿ ಸಿದ್ಧತೆ ನಡೆಸಿಕೊಂಡಿದೆ. ಇನ್ನು ಕಾಂಗ್ರೆಸ್‍ಗೆ ತನ್ನ ಕ್ಷೇತ್ರಗಳಾಗಿರುವ ಮಸ್ಕಿ ಮತ್ತು ಬಸವಕಲ್ಯಾಣ ಉಳಿಸಿಕೊಳ್ಳುವ ಸವಾಲು ಒಂದೆಡೆಯಾದ್ರೆ, ಬಿಜೆಪಿ ಪ್ರಾಬಲ್ಯದ ಬೆಳಗಾವಿ ಹಾಗೂ ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾದ ಸಿಂದಗಿಯನ್ನ ಕೈ ವಶ ಮಾಡಿಕೊಂಡು ಇಬ್ಬರಿಗೂ ತಿರುಗೇಟು ನೀಡಲು ಕೈ ಪಾಳಯ ತಂತ್ರ ರೂಪಿಸುತ್ತಿದೆ. ಇತ್ತ ಬೈ ಎಲೆಕ್ಷನ್ ನಿಂದ ದೂರ ಉಳಿಯುವ ಮಾತುಗಳನ್ನಾಡುತ್ತಿರುವ ದಳಪತಿಗಳಿಗೆ ತನ್ನ ಕ್ಷೇತ್ರ ಸಿಂದಗಿಯನ್ನ ಉಳಿಸಿಕೊಳ್ಳೋದು ಗೌರವದ ಪ್ರಶ್ನೆಯಾಗಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣೆಗೆ ಸಿದ್ಧತೆ ನಡೆಸುತ್ತಿವೆ.

narayanarao

ಸಿಂದಗಿ, ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಭೂಮಿಕೆ ಸಿದ್ಧವಾಗಿದೆ. ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬುದರ ಬಗ್ಗೆ ಪಕ್ಷಗಳಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯಯುತ್ತಿವೆ.

ckb mc managuli 3

ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಾಧ್ಯತೆ?:
ಸಿಂದಗಿ ಕ್ಷೇತ್ರದ ಮೇಲೆ ಡಿಸಿಎಂ ಲಕ್ಷ್ಮಣ ಸವದಿ ಕಣ್ಣು ಹಾಕಿದ್ದಾರೆ ಎನ್ನಲಾಗ್ತಿದೆ. ಇತ್ತ ಸ್ಥಳೀಯ ನಾಯಕ ರಮೇಶ್ ಭೂಸನೂರು ಸಹ ಸಿಂದಗಿ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಲ್ಲಿ ಲಕ್ಷ್ಮಣ ಸವದಿ ವರ್ಸಸ್ ರಮೇಶ್ ಭೂಸನೂರು ಎಂಬಂತೆ ಬಿಂಬಿತವಾಗಿದೆ. ಜೆಡಿಎಸ್ ನಿಂದ ಮನಗೂಳಿ ಅವರ ಪುತ್ರನಿಗೆ ಟಿಕೆಟ್ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್ ನಿಂದ ಮನಗೂಳಿ ಪುತ್ರನ ಆಪರೇಷನ್ ತಂತ್ರದ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.

Suresh Angadi 2

ಮಸ್ಕಿಯಲ್ಲಿ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಅಭ್ಯರ್ಥಿಯಾದ್ರೆ, ಕಾಂಗ್ರೆಸ್ ನಿಂದ ಆರ್.ಬಸನಗೌಡ ತುರುವಿಹಾಳ ಸ್ಪರ್ಧಿಸೋದು ಖಚಿತವಾಗಿದೆ. ಆದ್ರೆ ಮಸ್ಕಿಯಲ್ಲಿ ಇಬ್ಬರು ಅಭ್ಯರ್ಥಿಗಳು ಕಳೆದ ಬಾರಿ ಸ್ಪರ್ಧೆ ಮಾಡಿದ್ದರು. ಆದ್ರೆ ಈ ಬಾರಿ ಪಕ್ಷಗಳು ಅದಲು ಬದಲು ಆಗಿದೆ. ಜೆಡಿಎಸ್ ನಿಂದ ಅಭ್ಯರ್ಥಿ ಹಾಕುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

Maski by election

ಬಸವಕಲ್ಯಾಣದಲ್ಲೂ ಬಿಜೆಪಿಯಿಂದ ಮೂವರು, ಕಾಂಗ್ರೆಸ್ ನಿಂದ ನಾರಾಯಣ್ ರಾವ್ ಪುತ್ರನ ಸ್ಪರ್ಧೆ ಬಗ್ಗೆ ಸರ್ಕಸ್ ನಡೆದಿದ್ದು, ಅಂತಿಮವಾಗಿಲ್ಲ. ಬಸವಕಲ್ಯಾಣದ ಅಖಾಡದಿಂದಲೂ ಜೆಡಿಎಸ್ ದೂರ ಉಳಿಯುವ ಸಾಧ್ಯತೆಗಳಿವೆ. ಈ ನಡುವೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ದಿವಂಗತ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ, ಆರ್‍ಎಸ್‍ಎಸ್ ಹಿನ್ನೆಲೆವುಳ್ಳ ವೈದ್ಯ ರವಿ ಪಾಟೀಲ್ ನಡುವೆ ಪೈಪೋಟಿ ಇದ್ರೆ, ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಅವರನ್ನ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ.

ಒಟ್ಟಾರೆ ಮುಂದಿನ ವಾರದೊಳಗೆ ಉಪ ಚುನಾವಣೆ ಘೋಷಣೆಯಾದ್ರೆ ಬಜೆಟ್ ಅಧಿವೇಶನದ ಮೇಲೂ ಪರಿಣಾಮ ಬೀರಲಿದೆ. ಹಾಗಾಗಿ ಮೂರು ಪಕ್ಷಗಳು ಚುನಾವಣಾ ದಿನಾಂಕ ಘೋಷಣೆಯನ್ನು ಎದುರು ನೋಡ್ತಿವೆ.

Share This Article
Leave a Comment

Leave a Reply

Your email address will not be published. Required fields are marked *