– ಬಸವಕಲ್ಯಾಣದಲ್ಲಿ ವಿಜಯೇಂದ್ರ ಸ್ಪರ್ಧಿಸಲ್ಲ
ರಾಯಚೂರು: ಉಪಚುನಾವಣೆ ನಡಯುವ ಮಸ್ಕಿ, ಬಸವ ಕಲ್ಯಾಣ ಹಾಗೂ ಬೆಳಗಾವಿಯಲ್ಲಿ ನಾವೇ ಗೆಲ್ಲುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ನಿನ್ನೆ ಸಿಂಧನೂರಿಗೆ ಆಗಮಿಸಿದ್ದ ಸಿಎಂ, ಇಂದು ಬೆಂಗಳೂರಿಗೆ ತೆರಳುವುದಕ್ಕೂ ಮುನ್ನ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗೊರೇಬಾಳದ ಶ್ರೀಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬಳಿಕ ಸಿಂಧನೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಮಸ್ಕಿಯಲ್ಲಿ ಪ್ರತಾಪಗೌಡ ಬಂದಾಗ ಭವ್ಯ ಸ್ವಾಗತ ಮಾಡಿದ್ದಾರೆ. ಪ್ರತಾಪಗೌಡ ಪಾಟೀಲ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಮತ್ತೊಮ್ಮೆ ಬಂದು ಪ್ರಚಾರ ಮಾಡುತ್ತೇನೆ. ಬಸವಕಲ್ಯಾಣದಲ್ಲಿ ನಾವು ಗೆದ್ದಾಗಿದೆ. ಬೆಳಗಾವಿಯಲ್ಲಿ ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿಗಳ ಪಟ್ಟಿ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಇಂದು ನಾಳೆ ಅಭ್ಯರ್ಥಿ ಪಟ್ಟಿ ಬರುತ್ತದೆ. ಬಸವಕಲ್ಯಾಣದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗುವುದಿಲ್ಲ. ಅವರು ಮೈಸೂರಿಗೆ ಹೋಗಿ ಅಲ್ಲಿರುತ್ತಾರೆ. ಎರಡು ಮೂರು ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ಮುಂದಿನ ಬಾರಿ ವರುಣಾ ಕ್ಷೇತ್ರಕ್ಕೆ ನಿಲ್ಲುವ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂದರು.
5ಎ ಕಾಲುವೆ ಬದಲಿ ವಟಗಲ್ ಬಸವೇಶ್ವರ ಏತ ನೀರಾವರಿ ಮಾಡಲಾಗುವುದು. ಅವಶ್ಯವಿರುವ ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗುವುದು. ಇದೇ ವೇಳೆ ಯತ್ನಾಳ್ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು.